ಅಜಿತ್ ಪವಾರ್ ವಿಮಾನ ಅಪಘಾತಕ್ಕೆ ಹೊಸ ಟ್ವಿಸ್ಟ್: ಪತನದ ಸಿಸಿಟಿವಿ ದೃಶ್ಯ ಬಿಡುಗಡೆ

ದಿವಂಗತ ಎನ್ಸಿಪಿ ನಾಯಕ ಅಜಿತ್ ಪವಾರ್ (Ajit Pawar) ಅವರ ವಿಮಾನ ಅಪಘಾತ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ಅನುಮಾನಗಳಿಗೆ ಕಾರಣವಾಗುತ್ತಿದೆ. ಆರಂಭದಲ್ಲಿ ಇದು ಸಾಮಾನ್ಯ ಅಪಘಾತ (Accident) ಎಂದು ಹೇಳಲಾಗಿದ್ದರೂ, ಇದೀಗ ವಿಧ್ವಂಸಕ ಕೃತ್ಯದ ಶಂಕೆಗಳು ಮತ್ತಷ್ಟು ಬಲ ಪಡೆದುಕೊಳ್ಳುತ್ತಿವೆ. ಈ ನಡುವೆ, ಎನ್ಸಿಪಿ ನಾಯಕ ರೋಹಿತ್ ಪವಾರ್ (Rohit Pawar) ಮುಂಬೈನಲ್ಲಿ ಮಾಧ್ಯಮದ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ ಮತ್ತು ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.

ಏನಿದೆ ಬಿಡುಗಡೆ ಮಾಡಿದ ಹೊಸ ವಿಡಿಯೋದಲ್ಲಿ!
ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಬಾರಾಮತಿ ವಿಮಾನ ನಿಲ್ದಾಣದ ರನ್ವೇ ಬಳಿ ಪತನಗೊಂಡ ಕ್ಷಣಗಳ ಹೊಸ ವೀಡಿಯೊವನ್ನೂ ಬಿಡುಗಡೆ ಮಾಡಲಾಗಿದೆ. ಈ ದೃಶ್ಯಗಳು ವಿಮಾನ ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲ್ಪಟ್ಟಿವೆ ಎಂದು ತಿಳಿಸಲಾಗಿದೆ. ಬಾರಾಮತಿ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್ಗಳಿಗೆ ತರಬೇತಿ ನೀಡಲಾಗುತ್ತಿದ್ದು, ಅದರ ಭಾಗವಾಗಿ ಅಳವಡಿಸಿದ್ದ ಕ್ಯಾಮೆರಾದಲ್ಲೇ ಈ ಘಟನೆ ದಾಖಲಾಗಿದೆ ಎನ್ನಲಾಗಿದೆ.
ಎನ್ಸಿಪಿ ನಾಯಕರು ಹೇಳೋದೇನು?
ವೀಡಿಯೊ ಪ್ರದರ್ಶನದ ನಂತರ ಮಾತನಾಡಿದ ಎನ್ಸಿಪಿ ನಾಯಕ ರೋಹಿತ್ ಪವಾರ, “ರನ್ವೇಯ ಬದಿಯಲ್ಲಿ ಒಂದು ರೇಖೆ ಗೋಚರಿಸುತ್ತಿದೆ. ಅದರ ಬಳಿಕ ಸ್ಫೋಟ ಸಂಭವಿಸಿದಂತೆ ಕಾಣುತ್ತಿದೆ. ಆ ರೇಖೆ ಏನು? ಅದು ಬೆಂಕಿಯ ಗುರುತೇ ಅಥವಾ ಬೇರೆ ಯಾವುದೋ ವಸ್ತುವೇ? ಇದನ್ನು ತಜ್ಞರು ಪರಿಶೀಲಿಸಬೇಕು,” ಎಂದು ಪ್ರಶ್ನಿಸಿದರು. ಜೊತೆಗೆ, “ರನ್ವೇಯಲ್ಲಿ 5 ಕಿ.ಮೀ.ಗಿಂತ ಕಡಿಮೆ ಗೋಚರತೆ ಇತ್ತು ಎಂದು ಹೇಳಲಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ವಿಮಾನ ಏಕೆ ಇಳಿಯಲು ಮುಂದಾಯಿತು?” ಎಂದು ಅನುಮಾನ ವ್ಯಕ್ತಪಡಿಸಿದರು.
ತನಿಖೆ ಗತಿಯ ಮೇಲೂ ಅಸಮಾಧಾನ!
ಈ ಪ್ರಕರಣದಲ್ಲಿ ತನಿಖೆಯ ಗತಿಯ ಮೇಲೂ ಎನ್ಸಿಪಿ ನಾಯಕ ಅಸಮಾಧಾನ ವ್ಯಕ್ತಪಡಿಸಿದರು. “ಇದು ಅಪಘಾತವೋ ಅಥವಾ ಸಂಚುವೋ ಎಂಬುದನ್ನು ಸ್ಪಷ್ಟಪಡಿಸಲು ಸಂಪೂರ್ಣ ಹಾಗೂ ಪಾರದರ್ಶಕ ತನಿಖೆ ಅಗತ್ಯ. ನಮಗೆ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಕೆಲವು ಪ್ರಶ್ನೆಗಳು ಉದ್ಭವಿಸುತ್ತಿವೆ. ಯಾರ ಮೇಲೂ ನೇರ ಆರೋಪ ಮಾಡುವ ಉದ್ದೇಶವಿಲ್ಲ, ಆದರೆ ಸತ್ಯ ಹೊರಬರಬೇಕು,” ಎಂದು ಹೇಳಿದರು.
ವಿಮಾನ ಸಂಸ್ಥೆ ಕುರಿತು ಗಂಬೀರ ಆರೋಪ!
ವಿಮಾನಯಾನ ಸಂಸ್ಥೆಯ ಪಾತ್ರದ ಕುರಿತು ಕೂಡ ಗಂಭೀರ ಆರೋಪಗಳನ್ನು ಮುಂದಿಟ್ಟ ಎನ್ಸಿಪಿ ನಾಯಕ, ಕಂಪನಿಯು ಹಲವು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕೆಲವು ಸಂದರ್ಭಗಳಲ್ಲಿ ತಪ್ಪು ಮಾಹಿತಿ ನೀಡಿದ ಅನುಮಾನವಿದೆ ಎಂದು ಹೇಳಿದರು. “ಈ ವಿಚಾರದಲ್ಲಿ ಕೆಲವು ಅಂಶಗಳನ್ನು ನಿಗ್ರಹಿಸಲಾಗುತ್ತಿದೆ ಎಂಬ ಭಾವನೆ ಉಂಟಾಗಿದೆ. ರಾಜಕೀಯ ದೃಷ್ಟಿಕೋನದಿಂದಲ್ಲ, ಪ್ರಾಯೋಗಿಕ ದೃಷ್ಟಿಕೋನದಿಂದ ಈ ವಿಚಾರವನ್ನು ನೋಡಬೇಕು,” ಎಂದು ಅವರು ಅಭಿಪ್ರಾಯಪಟ್ಟರು.
ಸಮಗ್ರ ತನಿಖೆ ಅಗತ್ಯವಿದೆ ಎಂದ ರೋಹಿತ್ ಪವಾರ್!
ಸಿಐಡಿ ತನಿಖೆಯ ಸಾಮರ್ಥ್ಯದ ಮೇಲೂ ಪ್ರಶ್ನೆ ಎತ್ತಿದ ಅವರು, “ಈ ಪ್ರಕರಣದ ಗಂಭೀರತೆಯನ್ನು ಗಮನಿಸಿ, ಸ್ವತಂತ್ರ ಮತ್ತು ತಜ್ಞರನ್ನೊಳಗೊಂಡ ಸಮಗ್ರ ತನಿಖೆ ಅಗತ್ಯವಿದೆ,” ಎಂದು ಒತ್ತಾಯಿಸಿದರು. ಕಪ್ಪು ಪೆಟ್ಟಿಗೆ (ಬ್ಲ್ಯಾಕ್ ಬಾಕ್ಸ್) ವಿಚಾರದಲ್ಲೂ ಸ್ಪಷ್ಟತೆ ತರಬೇಕೆಂದು ಅವರು ಹೇಳಿದರು. ಇದಲ್ಲದೆ, ವಿವಾದದ ಕೇಂದ್ರದಲ್ಲಿರುವ ವಿಮಾನಯಾನ ಕಂಪನಿಯ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಬೇಕೆಂಬ ಆಗ್ರಹವೂ ವ್ಯಕ್ತವಾಗಿದೆ. “ಸತ್ಯ ಬಹಿರಂಗವಾಗುವವರೆಗೆ ಕಂಪನಿಯ ಸೇವೆಗಳ ಬಗ್ಗೆ ಪರಿಶೀಲನೆ ಅಗತ್ಯ,” ಎಂದು ಎನ್ಸಿಪಿ ನಾಯಕ ಹೇಳಿದರು.