ನೇಪಾಳದಲ್ಲಿ ಲ್ಯಾಂಡಿಂಗ್ ವೇಳೆ ಹೆಲಿಕಾಪ್ಟರ್ ಪತನ: ಆರೂ ಮಂದಿ ಪವಾಡಸದೃಶ ಪಾರು

ನೇಪಾಳ: ಮೃತದೇಹವನ್ನು ಹೊತ್ತೊಯ್ಯುತ್ತಿದ್ದ ಹೆಲಿಕಾಪ್ಟರ್ ಲ್ಯಾಂಡಿಂಗ್ ವೇಳೆ ನಿಯಂತ್ರಣ ತಪ್ಪಿ ಪತನಗೊಂಡ ಘಟನೆ ನೇಪಾಳದ ಖೋಟಾಂಗ್ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್ ಹೆಲಿಕಾಪ್ಟರ್‌ನಲ್ಲಿದ್ದ ಪೈಲೆಟ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
‘ಏರ್ ಡೈನಾಸ್ಟಿ’ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್, ಕಾಶ್ಮೀಂಡುವಿನಿಂದ ಮೃತದೇಹವೊಂದನ್ನು ಅಂತ್ಯಸಂಸ್ಕಾರಕ್ಕಾಗಿ ಖೋಟಾಂಗ್ ಜಿಲ್ಲೆಯ ಕೆಪಿಲಾಸಗಡಿ ಗ್ರಾಮೀಣ ಪುರಸಭೆಯ ಬಾಲಬೇಸಿಗೆ ಹೊತ್ತೊಯ್ಯುತ್ತಿತ್ತು. ಬೆಳಿಗ್ಗೆ ಸುಮಾರು 11:51ರ ಸುಮಾರಿಗೆ ನಿಗದಿಪಡಿಸಿದ ಕೃಷಿ ಭೂಮಿಯಲ್ಲಿ ಇಳಿಯಲು ಪ್ರಯತ್ನಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.

ಅಪಘಾತದ ಸಮಯದಲ್ಲಿ ಹೆಲಿಕಾಪ್ಟರ್‌ನಲ್ಲಿ ಅನುಭವಿ ಪೈಲಟ್ ಕ್ಯಾಪ್ಟನ್ ಸಬಿನ್ ಥಾಪಾ ಸೇರಿದಂತೆ ಒಟ್ಟು ಆರು ಜನರಿದ್ದರು. ಇವರಲ್ಲಿ 74 ವರ್ಷದ ಕಾಜಿ ಬಹದ್ದೂರ್ ರೈ ಎಂಬುವವರ ಕಾಲಿಗೆ ಮತ್ತು ಕಣ್ಣಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಕೂಡಲೇ ಮತ್ತೊಂದು ಹೆಲಿಕಾಪ್ಟರ್ ಮೂಲಕ ಕಾಠ್ಮಂಡುವಿನ ಹ್ಯಾಮ್ಸ್ (HAMS) ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಪೈಲಟ್ ಸೇರಿದಂತೆ ಉಳಿದ ಐವರು ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ನೇಪಾಳ ನಾಗರಿಕ ವಿಮಾನಯಾನ ಪ್ರಾಧಿಕಾರವು (CAAN) ಘಟನೆಯ ಬಗ್ಗೆ ತಾಂತ್ರಿಕ ತನಿಖೆಯನ್ನು ಕೈಗೊಂಡಿದೆ.