ರಾಷ್ಟ್ರೀಯ ಹೆದ್ದಾರಿ ಸಂಚಾರ ಸ್ಥಗಿತ ;ಕಿಲೋಮೀಟರ್‌ಗಟ್ಟಲೆ ನಿಂತ ವಾಹನಗಳು

ಕಲಬುರಗಿ/ಯಾದಗಿರಿ: ಕಲಬುರಗಿ ಹಾಗೂ ಮಹಾರಾಷ್ಟ್ರ ಭಾಗದಲ್ಲಿ ನಿರಂತರವಾಗಿ ಮಳೆ ಹಿನ್ನಲೆ ಭೀಮಾ ನದಿ ಹರಿವಿನ ಪ್ರಮಾಣದಲ್ಲಿ ಭಾರಿ ಹೆಚ್ಚಳವಾಗಿದೆ. ಇದರ ಜೊತೆಗೆ ಮಹಾರಾಷ್ಟ್ರದಿಂದ ನದಿಗೆ 3.40 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಮಾಡಿರುವ ಪರಿಣಾಮ ಜೇವರ್ಗಿ ಪಟ್ಟಣದ ಸಮೀಪದ ಕಟ್ಟಿಸಂಗಾವಿ ಸೇತುವೆ ಮುಳುಗಡೆಯಾಗಿದೆ. ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ನಡು ರಸ್ತೆಯ ಮೇಲೆಯೇ ವಾಹನಗಳು ಕಿಲೋಮೀಟರ್‌ಗಟ್ಟಲೆ ಕ್ಯೂ ನಿಂತಿವೆ.

ಮನೆ, ದೇಗುಲಗಳಿಗೆ ನುಗ್ಗಿದ ಹಳ್ಳದ ನೀರು
ಕಳೆದ 48 ಗಂಟೆಗಳಿಂದ ಕಲಬುರಗಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಅವಾಂತರಗಳೇ ಸೃಷ್ಟಿಯಾಗಿದ್ದು, ಹಳ್ಳ ಭರ್ತಿಯಾಗಿ ಕರ್ಚಖೇಡ ಗ್ರಾಮಕ್ಕೆ ಮಳೆ ನೀರು ನುಗ್ಗಿದೆ. ಗ್ರಾಮದ ಹಲವು ಮನೆಗಳು, ದೇವಸ್ಥಾನಕ್ಕೆ ಹಳ್ಳದ ನೀರು ನುಗ್ಗಿದ ಪರಿಣಾಮ ಜನರು ಪರದಾಟ ನಡೆಸಿದ್ದಾರೆ. ಜೇವರ್ಗಿ ತಾಲೂಕಿನ ಯಂಕಂಚಿ ಗ್ರಾಮದ ಬಸವೇಶ್ವರ ದೇವಸ್ಥಾನ, ಮಹಾಲಕ್ಷ್ಮೀ ದೇವಸ್ಥಾನಗಳಿಗೂ ಪ್ರವಾಹದ ನೀರು ನುಗ್ಗಿದೆ.
ಕಲಬುರಗಿ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿರೋ ಹಿನ್ನಲೆ ಶಾಲೆಗಳಿಗೆ ಎರಡು ದಿನ ರಜೆ ಘೋಷಿಸಿ ಜಿಲ್ಲಾಧಿಕಾರಿ ಬಿ.ಫೌಝೀಯಾ ತರುನ್ನುಮ್ ಆದೇಶಿಸಿದ್ದಾರೆ. ದಸರಾ ರಜೆಯಿಂದ ವಿನಾಯತಿ ಪಡೆದು ನಡೆಸುತ್ತಿರುವ ಶಾಲೆಗಳಿಗೆ ಈ ಆದೇಶ ಅನ್ವಯಿಸಲಿದೆ. ನಾಳೆಯೂ ಕಲಬುರಗಿಯಲ್ಲಿ ಮಳೆಯ ಎಚ್ಚರಿಕೆಯನ್ನ ಹವಾಮಾನ ಇಲಾಖೆ ನೀಡಿದ್ದು, ಆರೇಂಜ್ ಅಲರ್ಟ್ ಘೋಷಿಸಲಾಗಿದೆ.
ರೈತರ ಬದುಕು ಬರ್ಬಾದ್
ಮಹಾರಾಷ್ಟ್ರದ ಉಜನಿ ಜಲಾಶಯದಿಂದ ಭೀಮಾನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ ಪರಿಣಾಮ ಕಲಬುರಗಿಯ ಸನ್ನತಿ ಬ್ಯಾರೇಜ್ ನಿಂದ ಯಾದಗಿರಿ ಕಡೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ. ಭೀಮಾ ನದಿ ಪ್ರವಾಹಕ್ಕೆ ರೈತರ ಬದುಕು ಅಕ್ಷರಶಃ ಬರ್ಬಾದ್ ಆಗಿದ್ದು, ನಾಯ್ಕಲ್ ಗ್ರಾಮದಲ್ಲಿ ನೂರಾರು ಎಕರೆ ಬೆಳೆ ಪ್ರವಾಹದ ನೀರಲ್ಲಿ ಮುಳುಗಿದೆ. ನದಿ ಪ್ರದೇಶದ ಸುತ್ತ ಸುಮಾರು ಒಂದು ಕಿಲೋಮೀಟರ್ ವ್ಯಾಪ್ತಿಯವರೆಗೂ ಪ್ರವಾಹದ ನೀರು ನುಗ್ಗಿದ್ದು, ಭತ್ತ ಹಾಗೂ ಹತ್ತಿ ಬೆಳೆದಿದ್ದ ಜಮೀನು ಸಮುದ್ರದ ರೀತಿ ಕಾಣತೊಡಗಿದೆ. ಇದರ ಜೊತೆಗೆ ಯಾದಗಿರಿ ಜಿಲ್ಲೆಯಲ್ಲೂ ವರುಣ ಅಬ್ಬರಿಸುತ್ತಿದ್ದು, ಮಳೆಯ ಹೊಡೆತಕ್ಕೆ ಅನ್ನದಾತರು ಕಂಗೆಟ್ಟಿದ್ದಾರೆ.
