ಖೋಟಾನೋಟು ಪ್ರಕರಣದಲ್ಲಿ ನ್ಯಾಯಾಲಯದ ಜಾಮೀನು ಉಲ್ಲಂಘಿಸಿದ ಆರೋಪಿ ಬಂಧನ

ಮಂಗಳೂರು : ಖೋಟಾನೋಟು ಪ್ರಕರಣದಲ್ಲಿ ಅರೆಸ್ಟ್ ಆಗಿ ನ್ಯಾಯಾಲಯದಿಂದ ಜಾಮೀನು ಪಡೆದು ಬಳಿಕ ವಿಚಾರಣೆಗೆ ಹಾಜರಾಗದೇ ನಾಪತ್ತೆಯಾಗಿದ್ದ ಆರೋಪಿಯನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತನನ್ನು ನಿಜಾಮುದ್ದೀನ್ ಅಲಿಯಾಸ್ ನಿಜಾಮ್ (33) ಎಂದು ಗುರುತಿಸಲಾಗಿದೆ. ಆರೋಪಿ ಮೇಲೆ 2023 ರಲ್ಲಿ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಠಾಣಾ ಅ.ಕ್ರ 01/2023 ಕಲಂ 489 (ಬಿ) ಮತ್ತು (ಸಿ) ಜೊತೆಗೆ 34 ಭಾ.ದಂ.ಸಂ. ರಂತೆ ಪ್ರಕರಣ ದಾಖಲಾಗಿ ಮಾನ್ಯ ನ್ಯಾಯಲಯದಲ್ಲಿ ವಿಚಾರಣೆಯಲ್ಲಿದ್ದು ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದು ನಂತರ ಪ್ರಕರಣಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದು ಮಾನ್ಯ ನ್ಯಾಯಾಲಯವು ಈತನ ಮೇಲೆ 08 ಬಾರಿ ಬಂಧನ ವಾರಂಟ್ ಹೊರಡಿಸಿರುತ್ತದೆ. ಮಂಗಳೂರು ಪೂರ್ವ ಪೊಲೀಸ್ ಠಾಣಾ ಅಪರಾಧ ವಿಭಾಗದ ಸಿಬ್ಬಂದಿಗಳು ಹಾಗೂ ವಾರಂಟ್ ಜ್ಯಾರಿ ಸಿಬ್ಬಂದಿಗಳು ಈತನನ್ನು ದಿನಾಂಕ 25-08-2025 ರಂದು ಖಚಿತ ಮಾಹಿತಿ ಮೇರೆಗೆ ಉಪ್ಪಿನಂಗಡಿ ಬಳಿಯ ವಲಾಲು ಎಂಬಲ್ಲಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯದ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿದ ಮೇರೆಗೆ ಆಪಾದಿತನ ವಿರುದ್ಧ ಕಲಂ: 269 BNS-2023 ಪ್ರಕಾರ ಕ್ರಮ ಕೈಗೊಂಡು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿಲಾಗಿದೆ