ಮೆಟಾದಿಂದ ಹತ್ತುಸಾವಿರ ಕೋಟಿ ಸಂಬಳದ ಆಫರ್ ತಿರಸ್ಕರಿಸಿದ ವ್ಯಕ್ತಿ

ನವದೆಹಲಿ: ಡೇನಿಯಲ್ ಫ್ರಾನ್ಸಿಸ್ ಎನ್ನುವ ಎಐ ಎಕ್ಸ್ಪರ್ಟ್ ಈಗ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಲ್ಲಿದ್ದಾನೆ. ಫೇಸ್ಬುಕ್ನ ಮಾಲಕಸಂಸ್ಥೆಯಾದ ಮೆಟಾದ ದೊಡ್ಡ ಆಫರ್ (Meta Offer) ಅನ್ನು ಡೇನಿಯಲ್ ತಿರಿಸ್ಕರಿಸಿದ್ದಾನೆ. ನಾಲ್ಕು ವರ್ಷಗಳಿಗೆ 1.2 ಬಿಲಿಯನ್ ಡಾಲರ್ (10,400 ಕೋಟಿ ರೂ) ಸಂಭಾವನೆ ನೀಡುವ ಬಹಳ ದೊಡ್ಡ ಆಫರ್ ಇದು.

ಒಮ್ಮೆಲೇ ಬಿಲಿಯನೇರ್ ಆಗಬಹುದಾದ ಅವಕಾಶವನ್ನು ಈತ ಕೈಚೆಲ್ಲಿರುವುದು ಆನ್ಲೈನ್ನಲ್ಲಿ ಬೆರಗು ಮೂಡಿಸಿದೆ.
‘ಸ್ನೇಹಿತರೆ, ನಾಲ್ಕು ವರ್ಷಗಳಿಗೆ 10,400 ಕೋಟಿ ರೂ ಸಂಬಳವನ್ನು ಆಫರ್ ಮಾಡಿದ್ದಾರೆ. ನಾನ್ಯಾವತ್ತೂ ಇಷ್ಟು ಮೊತ್ತವನ್ನು ಕಂಡಿದ್ದಿಲ್ಲ. ಏನು ನಡೆಯುತ್ತಿದೆಯೋ ಗೊತ್ತಿಲ್ಲ’ ಎಂದು ಒಂದು ಪೋಸ್ಟ್ನಲ್ಲಿ ಡೇನಿಯಲ್ ಫ್ರಾನ್ಸಿಸ್ ಹೇಳಿಕೊಂಡಿದ್ದಾನೆ. ಮತ್ತೊಂದು ಅಪ್ಡೇಟೆಡ್ ಪೋಸ್ಟ್ ಹಾಕಿರುವ ಈತ ತಾನು ಆ ಜಾಬ್ ಆಫರ್ ಅನ್ನು ತಿರಸ್ಕರಿಸಿರುವುದಾಗಿ ತಿಳಿಸಿದ್ದಾನೆ.
ಡೇನಿಯಲ್ಗೆ ಮೆಟಾದಿಂದ ಇಷ್ಟೊ ದೊಡ್ಡ ಆಫರ್ ಯಾಕೆ?
ಡೇನಿಯಲ್ ಫ್ರಾನ್ಸಿಸ್ ಎಐ ತಜ್ಞನಾಗಿದ್ದಾನೆ. ಈತ ಆಬೆಲ್ (Abel) ಎನ್ನುವ ಅಮೆರಿಕ ಮೂಲದ ಟೆಕ್ ಕಂಪನಿ ಸ್ಥಾಪಕ. ಈತ ಬಹಳ ವಿಶೇಷವಾದ ಎಐ ಟೆಕ್ನಾಲಜಿಯೊಂದನ್ನು ಅಭಿವೃದ್ಧಿಪಡಿಸಿದ್ದಾನೆ. ಬಾಡಿ ಕ್ಯಾಮ್ ಫೂಟೇಜ್ನಿಂದ ಪೊಲೀಸ್ ರಿಪೋರ್ಟ್ ಜನರೇಟ್ ಮಾಡಿ, ಕಾಲ್ ಡಾಟಾವನ್ನು ತನ್ನಂತಾನೆ ಕಳುಹಿಸುವಂತಹ ತಂತ್ರಜ್ಞಾನ ಈತನ ಬಳಿ ಇದೆ. ಹೀಗಾಗಿ, ಮೆಟಾ ಈತನನ್ನೇ ಖರೀದಿಸುವ ಆಲೋಚನೆ ಮಾಡಿದ್ದಿರಬಹುದು.
ಮೆಟಾದಿಂದ ‘ಸೂಪರ್ ಇಂಟೆಲಿಜೆನ್ಸ್ ಲ್ಯಾಬ್’
ವರದಿಗಳ ಪ್ರಕಾರ, ಮಾರ್ಕ್ ಜುಕರ್ಬರ್ಗ್ ಮಾಲಕತ್ವದ ಮೆಟಾ ಸಂಸ್ಥೆ ಒಂದು ಬಹಳ ಅತ್ಯಾಧುನಿಕವಾದ ‘ಸೂಪರ್ ಇಂಟೆಲಿಜೆನ್ಸ್ ಲ್ಯಾಬ್’ ಸ್ಥಾಪಿಸಲು ಹೊರಟಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಎಲ್ಲಾ ಹೊಸ ಆವಿಷ್ಕಾರಗಳನ್ನು ಪಡೆಯುವುದು, ಎಐ ಪರಿಣಿತರನ್ನು ಭಾರೀ ಹಣಕ್ಕೆ ಖರೀದಿಸುವುದ ಇತ್ಯಾದಿ ಕೆಲಸ ಮಾಡಲು ಹೊರಟಿದೆ.
ಈಗ ಉದ್ಯೋಗ ಮಾರುಕಟ್ಟೆಯಲ್ಲಿ, ಅದರಲ್ಲೂ ತಂತ್ರಜ್ಞಾನ ಕಂಪನಿಗಳಲ್ಲಿ ಎಐ ತಜ್ಞರಿಗೆ ಸಖತ್ ಬೇಡಿಕೆ ಇದೆ. ವರ್ಷದಿಂದ ವರ್ಷಕ್ಕೆ ಎಐ ಸ್ವರೂಪವೇ ಬದಲಾಗುವಷ್ಟು ಅಗಾಧ ವೇಗದಲ್ಲಿ ಈ ಕ್ಷೇತ್ರದಲ್ಲಿ ಬೆಳವಣಿಗೆ ಆಗುತ್ತಿದೆ. ಹೀಗಾಗಿ, ಮೆಟಾದಂಥ ಕಂಪನಿಗಳು ಎಐ ಪರಿಣಿತರಿಗಾಗಿ ಸಿಕ್ಕಸಿಕ್ಕಷ್ಟು ದುಡ್ಡು ಸುರಿಯಲು ಸಿದ್ಧವಾಗಿವೆ.
