ಮಲಪ್ಪುರಂ/ವಾಲ್ಪಾರೈ: 13ನೇ ಹೇರ್ಪಿನ್ ತಿರುವಿನಲ್ಲಿ ಕಂದಕಕ್ಕೆ ಉರುಳಿದ ಮಿನಿವ್ಯಾನ್; 9 ಮಂದಿ ದಾರುಣ ಸಾ*ವು

ಮಲಪ್ಪುರಂ/ವಾಲ್ಪಾರೈ : ತಮಿಳುನಾಡಿನ ಪ್ರಸಿದ್ಧ ಪ್ರವಾಸಿ ತಾಣ ವಾಲ್ಪಾರೈನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮಲಪ್ಪುರಂ ಮೂಲದ ಎಂಟು ಮಂದಿ ಮೃತಪಟ್ಟಿದ್ದಾರೆ. ಶಿಕ್ಷಕರು ಮತ್ತು ಅವರ ಕುಟುಂಬಸ್ಥರಿದ್ದ ಮಿನಿವ್ಯಾನ್ 13ನೇ ಹೇರ್ಪಿನ್ ತಿರುವಿನಲ್ಲಿ ನಿಯಂತ್ರಣ ತಪ್ಪಿ ನೂರಾರು ಅಡಿ ಆಳದ ಕಂದಕಕ್ಕೆ ಉರುಳಿದ್ದರಿಂದ ಈ ದುರಂತ ಸಂಭವಿಸಿದೆ.

ಮಲಪ್ಪುರಂನ ಸ್ಥಳೀಯ ಶಾಲೆಯ ಶಿಕ್ಷಕರು ಹಾಗೂ ಅವರ ಕುಟುಂಬದ ಒಟ್ಟು 16 ಸದಸ್ಯರ ತಂಡ ಈ ಪ್ರವಾಸ ಹಮ್ಮಿಕೊಂಡಿತ್ತು. ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಪೊಲ್ಲಾಚಿಯಿಂದ ಮರಳುತ್ತಿದ್ದಾಗ, ಹೇರ್ಪಿನ್ ಬೆಂಡ್ 13ರಲ್ಲಿ ಚಾಲಕನ ನಿಯಂತ್ರಣ ತಪ್ಪಿದ ವಾಹನ ನೇರವಾಗಿ ಕೆಳಗಿನ 11ನೇ ತಿರುವಿನ ರಸ್ತೆಗೆ ಉರುಳಿದೆ.
ಮೃತರಲ್ಲಿ ಪರಮಲ್ ಎಎಲ್ಪಿ ಶಾಲೆಯ ಮುಖ್ಯೋಪಾಧ್ಯಾಯಿನಿ ಅಜಿತಾ (54) ಕೂಡ ಸೇರಿದ್ದಾರೆ. ಉಳಿದ ಮೃತರ ಗುರುತು ಇನ್ನಷ್ಟೇ ಅಧಿಕೃತವಾಗಿ ದೃಢಪಡಬೇಕಿದೆ. ಅಪಘಾತ ನಡೆದ ಸ್ಥಳವು ನಿರ್ಜನ ಪ್ರದೇಶವಾಗಿದ್ದರಿಂದ ರಕ್ಷಣಾ ಕಾರ್ಯಾಚರಣೆ ವಿಳಂಬವಾಯಿತು. ಗಾಯಗೊಂಡಿರುವ 8 ಮಂದಿಯನ್ನು ಪೊಲ್ಲಾಚಿ ಮತ್ತು ಕೊಯಮತ್ತೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ.