ಲೋಕಸಭೆ ಮುಂಗಾರು ಅಧಿವೇಶನ ಅಂತ್ಯ: 12 ಮುಖ್ಯ ಮಸೂದೆಗಳು ಅಂಗೀಕಾರ, ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ

ನವದೆಹಲಿ: ವಿಪಕ್ಷಗಳ ಪ್ರತಿಭಟನೆ, ಕಲಾಪಕ್ಕೆ ಅಡ್ಡಿ, ಸಭಾತ್ಯಾಗಗಳ ನಡುವೆಯೇ ಮುಂಗಾರು ಅಧಿವೇಶನ ಅಂತ್ಯಗೊಂಡಿದ್ದು, ಲೋಕಸಭೆ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಯಿತು.

ಅಧಿವೇಶನದ ಕೊನೆಯ ದಿನವಾದ ಇಂದು ಮತದಾರರ ಪಟ್ಟಿ ಪರಿಷ್ಕರಣೆ ವಿಷಯ ಕುರಿತು ವಿಪಕ್ಷಗಳ ಗದ್ದಲ ಮುಂದುವರಿದಿದ್ದರಿಂದ ಕಲಾಪ ನಡೆಸಲು ಸಾಧ್ಯವಾಗದೇ ಸ್ಪೀಕರ್ ಅವರು ಮಧ್ಯಾಹ್ನ 12 ಗಂಟೆವರೆಗೆ ಕಲಾಪ ಮುಂದೂಡಿದ್ದರು. ನಂತರ ಅನಿರ್ದಿಷ್ಟಾವಧಿಗೆ ಕಲಾಪ ಮುಂದೂಡಿದರು. ಈ ಮೂಲಕ ಕಲಾಪಕ್ಕೆ ಅಡ್ಡಿಪಡಿಸುವವರಿಗೆ ಸ್ಪೀಕರ ಓಂ ಬಿರ್ಲಾ ತಕ್ಕ ಪಾಠ ಕಲಿಸಿದರು.
ಗದ್ದಲ, ವಿಪಕ್ಷಗಳ ಪ್ರತಿಭಟನೆ ನಡುವೆಯೇ ಹಲವಾರು ಪ್ರಮುಖ ಮಸೂದೆಗಳು ಅಂಗೀಕಾರಗೊಂಡವು. ಲೋಕಸಭೆಯಲ್ಲಿ 14 ಮಸೂದೆಗಳು ಮಂಡನೆಯಾಗಿದ್ದು, ಈ ಪೈಕಿ 12 ಮಸೂದೆಗಳನ್ನು ಅಂಗೀಕರಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು
12 ಮಸೂದೆಗಳ ಅಂಗೀಕಾರ: ಸ್ಪೀಕರ್
ಅಧಿವೇಶನದ ವಿವರ ಮಂಡಿಸಿದ ಸ್ಪೀಕರ್ ಓಂ ಬಿರ್ಲಾ, ಒಟ್ಟು 14 ಸರ್ಕಾರಿ ಮಸೂದೆಗಳನ್ನ ಮಂಡಿಸಲಾಗಿದ್ದು, ಅವುಗಳಲ್ಲಿ 12 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಜುಲೈ 28 ಮತ್ತು 29 ರಂದು ವಿಶೇಷ ಚರ್ಚೆಗಳು ನಡೆದವು, ಇದು ಪ್ರಧಾನ ಮಂತ್ರಿಯವರ ಉತ್ತರದೊಂದಿಗೆ ಮುಕ್ತಾಯವಾಯಿತು. ಆಗಸ್ಟ್ 18ರಂದು ಬಾಹ್ಯಾಕಾಶ ಕಾರ್ಯಕ್ರಮದ ಸಾಧನೆಗಳ ಕುರಿತು ವಿಶೇಷ ಚರ್ಚೆಯನ್ನೂ ಸಹ ನಡೆಸಲಾಯಿತು ಎಂದು ತಿಳಿಸಿದರು.
120 ಗಂಟೆಗಳ ಪೈಕಿ ಕೇವಲ 37 ಗಂಟೆ ಚರ್ಚೆ
ಮುಂದುವರಿದು.. ಒಟ್ಟು 419 ಪ್ರಶ್ನೆಗಳನ್ನು ಕೇಳಲಾಗಿದ್ದು, ಕೇವಲ 55 ಪ್ರಶ್ನೆಗಳಿಗಷ್ಟೇ ಮೌಖಿಕವಾಗಿ ಉತ್ತರಿಸಲಾಯಿತು. ಎಲ್ಲರೂ ಆರಂಭದಲ್ಲಿ 120 ಗಂಟೆಗಳ ಕಾಲ ಚರ್ಚಿಸುವುದಾಗಿ ನಿರ್ಧರಿಸಿದ್ದರು. ಆದ್ರೆ ನಿರಂತರ ಕಲಾಪ ಮುಂದೂಡಿಕೆ, ಸಭಾತ್ಯಾಗ, ಪ್ರತಿಭಟನೆಯ ಕಾರಣಗಳಿಂದಾಗಿ ಕೇಲವ 37 ಗಂಟೆಗಳ ಕಾಲವಷ್ಟೇ ಚರ್ಚಿಸಲಾಯಿತು ಎಂದು ಸ್ಪೀಕರ್ ವಿವರ ಕೊಟ್ಟರು.
ಸಭ್ಯತೆಯ ಪಾಠ ಹೇಳಿದ ಸ್ಪೀಕರ್
ಇಡೀ ದೇಶ ನಮ್ಮ ನಡವಳಿಕೆಗಳನ್ನು ಗಮನಿಸುತ್ತದೆ. ಜನ ನಮ್ಮ ಮೇಲೆ ಬಹಳಷ್ಟು ನಿರೀಕ್ಷೆಯಿಟ್ಟು ಆಯ್ಕೆ ಮಾಡಿ ಕಳಿಸಿರುತ್ತಾರೆ. ಹಾಗಾಗಿ ನಾವು ಗೌರವಯುತ ಚರ್ಚೆ ನಡೆಸಬೇಕು. ಆದ್ರೆ ಕೆಲ ದಿನಗಳಿಂದ ಸಹನ ಸರಿಯಾಗಿ ನಡೆಯುತ್ತಿಲ್ಲ. ಗದ್ದಲದಿಂದಲೇ ಕೂಡಿರುತ್ತದೆ. ಇದು ನಮ್ಮ ಸಂಸತ್ತಿನ ಸಂಪ್ರದಾಯವೂ ಅಲ್ಲ. ಈ ಅಧಿವೇಶನದಲ್ಲಿ ಬಳಸಿದ ಭಾಷೆ, ಘೋಷಣೆಗಳನ್ನು ಎತ್ತುವ ರೀತಿ, ಅದು ಸಭ್ಯತೆಯೂ ಅಲ್ಲ. ಇನ್ನು ಮುಂದಾದರೂ ಘೋಷಣೆ, ಪ್ರತಿಭಟನೆಗಳನ್ನು ತಪ್ಪಿಸಿ ಗೌರವಯುತ ಚರ್ಚೆ ನಡೆಸಬೇಕೆಂದು ಬಯಸುತ್ತೇನೆ ಎಂಬುದಾಗಿ ಜನಪ್ರತಿನಿಧಿಗಳಿಗೆ ಕಿವಿಮಾತು ಹೇಳಿದರು
ಅಂಗೀಕಾರಗೊಂಡ ಪ್ರಮುಖ ಮಸೂದೆಗಳು
* ವ್ಯಾಪಾರಿ ಸಾಗಣೆ, ಬಂದರುಗಳು, ಗಣಿ ಮತ್ತು ಖನಿಜ ಮಸೂದೆಗಳು
* ಕ್ರೀಡಾ ಆಡಳಿತ ಮತ್ತು ಡೋಪಿಂಗ್ ವಿರೋಧಿ ಸುಧಾರಣೆ ಮಸೂದೆ
* ಆದಾಯ ತೆರಿಗೆ ಪರಿಷ್ಕರಣೆ ಮತ್ತು GST ತಿದ್ದುಪಡಿ ಮಸೂದೆ
* ಕಡಲ ಸುಧಾರಣೆಗಳು: ಸರಕು ಸಾಗಣೆ, ಸಮುದ್ರ ಮತ್ತು ಕರಾವಳಿ ಸಾಗಣೆ ಮಸೂದೆ
* ಗೋವಾದಲ್ಲಿ ಟ್ರಿಸ್ತಾನ್ ಸೀಟುಗಳನ್ನು ಮರುಹೊಂದಿಕೆ
* ಆನ್‌ಲೈನ್ ಗೇಮಿಂಗ್ ನಿಯಂತ್ರಣ ಮಸೂದೆಗಳನ್ನು ಅಂಗೀಕರಿಸಲಾಗಿದೆ.
