ರಾಯಚೂರಿನಲ್ಲಿ ಎಂಆರ್‌ಪಿ ದರ ಮೀರಿ ಮದ್ಯ ಮಾರಾಟ – ಅಬಕಾರಿ ದಾಳಿ

ರಾಯಚೂರು: ಮದ್ಯದಂಗಡಿಗಳಲ್ಲಿ ಎಂಆರ್‌ಪಿ ದರದಲ್ಲಿ ಮದ್ಯ ಮಾರಾಟ ಮಾಡುವುದು ಕಡ್ಡಾಯವಾಗಿದೆ. ಈ ನಿಯಮಗಳನ್ನು ಅನುಸರಿಸದ ರಾಯಚೂರಿನ ಹಲವು ಮದ್ಯ ಮಳಿಗೆಗಳ ಮೇಲೆ ಅಬಕಾರಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕರ್ನಾಟಕದೆಲ್ಲೆಡೆ ಮದ್ಯ, ಅದರಲ್ಲೂ ಬಿಯರ್ ಮಾರಾಟ ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಅಧಿಕಾರಿಗಳು ಎಂಆರ್‌ಪಿ ದರದ ಮಾರಾಟದ ಬಗ್ಗೆ ನಿಗಾ ಇಟ್ಟಿದ್ದಾರೆ. ಮದ್ಯದ ಮಳಿಗೆಗಳಿಗೆ ಎಂಆರ್ ಪಿ ದರ ಕಡ್ಡಾಯದ ಸ್ಟಿಕ್ಕರ್ ಅಂಟಿಸುತ್ತಿದ್ದಾರೆ. ಇದು ಮದ್ಯ ಪ್ರಿಯರಿಗೆ ಖುಷಚಿ ಕೊಟ್ಟಿದೆ.

ಸಿಎಲ್ -2 ಅಡಿಯ ವೈನ್ ಶಾಪ್ ಗಳು, ಎಂಎಸ್ ಐಎಲ್ ಸಂಸ್ಥೆಯ ಸಿಎಲ್-11(ಸಿ) ಅಡಿಯ ಮಳಿಗೆಗಳಲ್ಲಿ ಎಂಆರ್ ಪಿ ದರ ಕಡ್ಡಾಯವಾಗಿರುತ್ತದೆ. ಎಂಆರ್ ಪಿಗಿಂತ ಹೆಚ್ಚಿನ ದರ ವಸೂಲಿ ಮಾಡಿದರೆ ದೂರು ನೀಡಲು ಗ್ರಾಹಕರಿಗೆ ಸಲಹೆ ನೀಡಲಾಗಿದೆ.
ಎಂಎಸ್ ಐಎಲ್ ಹಾಗೂ ವೈನ್ ಶಾಪ್ ಗಳ ಮೇಲೆ ಅಬಕಾರಿ ಇಲಾಖೆ ನಿಗಾ ಇರಿಸಿದೆ. ರಾಯಚೂರಿನಲ್ಲಿ ಅಬಕಾರಿ ಅಧಿಕಾರಿಗಳಿಂದ ವಿವಿಧ ಮದ್ಯದ ಮಳಿಗೆಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಎಂಆರ್ ಪಿ ದರದ ನಿಯಮ ಉಲ್ಲಂಘನೆ ವಿರುದ್ಧ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಕೆಲ ವೈನ್ ಶಾಪ್ ಗಳಲ್ಲಿ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಪತ್ತೆಯಾಗಿದೆ.
ಎಂಆರ್ ಪಿ ದರಕ್ಕಿಂತಲೂ ಗ್ರಾಹಕರಿಂದ 60-80 ರೂ ಹೆಚ್ಚಿನ ದರ ವಸೂಲಿ ಮಾಡಲಾಗುತ್ತಿದೆ. ಮದ್ಯದ ಮಳಿಗೆಗಳ ನಿಯಮ ಉಲ್ಲಂಘಟನೆಗೆ 50 ಸಾವಿರ ವರೆಗೆ ದಂಡ ಹಾಗೂ ಸರಣಿ ಉಲ್ಲಂಘನೆಗೆ ಲೈಸೆನ್ಸ್ ರದ್ದತಿಗೆ ಶಿಫಾರಸ್ಸು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದ್ದಾರೆ. ವೈನ್ ಶಾಪ್ ವೊಂದರಲ್ಲಿ ಎಂಆರ್ ಪಿ ದರ ಉಲ್ಲಂಘನೆ ಹಿನ್ನೆಲೆ ಕೇಸ್ ದಾಖಲಿಸಲಾಗುವುದು ಎಂದು ಹೇಳಿದ್ದು, ವೈನ್ ಶಾಪ್ನಲ್ಲಿ ಇಬ್ಬರನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.