ಸಚಿವರ ಕೋಪಕ್ಕೆ ಬಲಿಯಾದ ಕೆಎಸ್‌ಆರ್‌ಟಿಸಿ ಚಾಲಕ: ನಿಂದನೆ ಮತ್ತು ವರ್ಗಾವಣೆ ಬೆನ್ನಲ್ಲೇ ಬಸ್ ಚಲಾಯಿಸುವಾಗ ಜೈಮನ್ ಜೋಸೆಫ್ ಕುಸಿದು ಸಾವು

ಕಾಂಜೀರಪಳ್ಳಿ: ಸಚಿವರ ನಿಂದನೆಗೆ ಗುರಿಯಾಗಿದ್ದ ಕೆಎಸ್‌ಆರ್‌ಟಿಸಿ ಚಾಲಕ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಕಾಂಜೀರಪಲ್ಲಿಯಲ್ಲಿ ನಡೆದಿದೆ. ಡ್ರೈವರ್ ಸೀಟಿನ ಕಿಟಕಿ ಪಕ್ಕ ಪ್ಲಾಸ್ಟಿಕ್ ಬಾಟಲಿಗಳನ್ನುಇಟ್ಟುಕೊಂಡು ಪ್ರಯಾಣಿಸುತ್ತಿರುವುದಕ್ಕೆ ಕೋಪಗೊಂಡ ಸಚಿವರು ಗದರಿದ್ದರು, ಜತೆಗೆ ಅವರನ್ನು ಬೇರೆಡೆ ವರ್ಗಾಯಿಸಿದ್ದರು. ಬಸ್ ಚಲಾಯಿಸುತ್ತಿರುವಾಗಲೇ ಪೊನ್ಕುನ್ನಂ ಡಿಪೋದ ಚಾಲಕ ಜೈಮನ್ ಜೋಸೆಫ್ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ.

ಕಾಂಜೀರಪಳ್ಳಿ ಜನರಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಬಳಿಕ ಜೈಮನ್ ಅವರನ್ನು ವಿಶೇಷ ಚಿಕಿತ್ಸೆಗಾಗಿ ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ಜೈಮನ್ ಸೇರಿದಂತೆ ನೌಕರರನ್ನು ತ್ರಿಶೂರ್‌ಗೆ ವರ್ಗಾಯಿಸುವ ಬಗ್ಗೆ ವಿವಾದ ಉಂಟಾದ ನಂತರ ಅದನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು.
ಮುಂಡಕ್ಕಯಂ-ಪಾಲಾ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಕಾಂಜೀರಪ್ಪಳ್ಳಿಯ ಪೂತಕುಳಿಯಲ್ಲಿ ಈ ಘಟನೆ ನಡೆದಿದೆ. 1ನೇ ತಾರೀಖಿನಂದು ಬೆಳಗ್ಗೆ, ಮುಂಡಕ್ಕಯಂನಿಂದ ತಿರುವನಂತಪುರಕ್ಕೆ ಬರುತ್ತಿದ್ದ ಬಸ್ಸಿನ ಮುಂಭಾಗದ ಕಿಟಕಿಯ ಮುಂದೆ ಬಾಟಲಿಗಳು ಸಾಲುಗಟ್ಟಿ ನಿಂತಿರುವುದನ್ನು ನೋಡಿದ ಸಚಿವ ಕೆ.ಬಿ. ಗಣೇಶ್ ಕುಮಾರ್ ಬಸ್ ನಿಲ್ಲಿಸಿ ಚಾಲಕನನ್ನು ಗದರಿಸಿದ್ದರು.
ಮತ್ತಷ್ಟು ಓದಿ: ಸಾವಿನಲ್ಲೂ ಮಾನವೀಯತೆ ಮೆರೆದ ಕೆಎಸ್‌ಆರ್‌ಟಿಸಿ ಚಾಲಕ: ಹೃದಯಾಘಾತವಾದರೂ ಬಸ್ ನಿಲ್ಲಿಸಿ ಪ್ರಯಾಣಿಕರ ರಕ್ಷಣೆ!
ನಂತರ ಸಚಿವರು ಜೈಮನ್ ಸೇರಿದಂತೆ ಮೂವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರು. ನಂತರ ವರ್ಗಾವಣೆ ಆದೇಶ ಹೊರಡಿಸಲಾಯಿತು. ಜೈಮನ್ ಅವರಿಗೆ ಮಧುಮೇಹ ಮತ್ತು ರಕ್ತದೊತ್ತಡಕ್ಕೆ ಔಷಧಿ ತೆಗೆದುಕೊಳ್ಳುತ್ತಿರುವುದಾಗಿ ಮತ್ತು ಘಟನೆಯ ದಿನ ಬಸ್ ಮುಂದೆ ಇಡಲಾಗಿದ್ದ ಬಾಟಲಿಗಳನ್ನು ಕುಡಿಯುವ ನೀರನ್ನು ಹಿಡಿದಿಡಲು ಬಳಸಲಾಗುತ್ತಿತ್ತು ಎಂದು ಹೇಳಿಕೆ ನೀಡಿದ್ದರು. ಆದರೂ ವರ್ಗಾವಣೆಯನ್ನು ಹಿಂತೆಗೆದುಕೊಂಡಿರಲಿಲ್ಲ. ಇದೀಗ ಪ್ರಾಣವನ್ನೇ ಬಿಟ್ಟಿದ್ದಾರೆ.