ಕೊಲ್ಲೂರು: ಮೂಕಾಂಬಿಕಾ ದೇವಸ್ಥಾನದ ಎದುರು ತಪ್ಪಿದ ಭಾರಿ ದುರಂತ – ಭಕ್ತರ ಮೇಲೆ ಉರುಳಿಬಿದ್ದ ಬೃಹತ್ ಲೈಟ್ ಸೆಟ್, ವೃದ್ಧ ಗಂಭೀರ!

ಉಡುಪಿ: ಶರನ್ನವರಾತ್ರಿ ಮಹೋತ್ಸವದ ಧಾರ್ಮಿಕ ಸಂಭ್ರಮ ಹಾಗೂ ಜನದಟ್ಟಣೆಯಿಂದ ಕೂಡಿದ್ದ ಪ್ರಸಿದ್ಧ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಮುಂಭಾಗದಲ್ಲಿ ಭಾರಿ ದುರಂತವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ. ವಾಣಿಜ್ಯ ಸಂಕೀರ್ಣದ ಮಹಡಿಗೆ ಅಳವಡಿಸಲಾಗಿದ್ದ ಬೃಹತ್ ಗಾತ್ರದ ಅಲಂಕಾರಿಕ ಲೈಟ್ ಸೆಟ್ ಗಾಳಿಯ ರಭಸಕ್ಕೆ ಏಕಾಏಕಿ ಭಕ್ತರ ಮೇಲೆ ಉರುಳಿಬಿದ್ದ ಪರಿಣಾಮ, ವಯೋವೃದ್ಧರೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.ಮಧ್ಯಾಹ್ನದ ವೇಳೆ ತೀವ್ರ ಬಿಸಿಲು ಇದ್ದ ಕಾರಣ ದೇವಸ್ಥಾನದ ಎದುರಿನ ವಾಣಿಜ್ಯ ಸಂಕೀರ್ಣದ ನೆರಳಿನ ಆಶ್ರಯದಲ್ಲಿ ಹತ್ತಾರು ಭಕ್ತಾದಿಗಳು ನಿಂತುಕೊಂಡಿದ್ದರು. ನವರಾತ್ರಿ ಉತ್ಸವದ ವಿಶೇಷ ದೀಪಾಲಂಕಾರಕ್ಕಾಗಿ ಕಟ್ಟಡದ ಮಹಡಿಯ ಮೇಲ್ಭಾಗದಲ್ಲಿ ಬೃಹತ್ ಗಾತ್ರದ ಲೈಟ್ ಸೆಟ್ಗಳನ್ನು ಅಳವಡಿಸಲಾಗಿತ್ತು.ಇದೇ ವೇಳೆ ಇದ್ದಕ್ಕಿದ್ದಂತೆ ಬಲವಾದ ಗಾಳಿ ಬೀಸಿದ ಪರಿಣಾಮ, ಲೈಟ್ ಸೆಟ್ನ ತೂಕವನ್ನು ತಾಳಲಾರದೆ ಕಟ್ಟಡದ ಮೇಲಿಂದ ನೆರಳಿನಲ್ಲಿ ನಿಂತಿದ್ದ ಭಕ್ತರ ಮೇಲೆ ನೇರವಾಗಿ ಕುಸಿದುಬಿದ್ದಿದೆ. ಲೈಟ್ ಸೆಟ್ ಬೀಳುತ್ತಿದ್ದಂತೆಯೇ ಎಚ್ಚೆತ್ತ ಬಹುತೇಕ ಭಕ್ತರು ತಕ್ಷಣವೇ ಚುರುಕಾಗಿ ಪಕ್ಕಕ್ಕೆ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಮೂವರು ಭಕ್ತರ ಮೇಲೆ ಈ ಭಾರಿ ಗಾತ್ರದ ಲೈಟ್ ಸೆಟ್ ಬಿದ್ದಿದೆ. ಘಟನೆಯಲ್ಲಿ ವಯೋವೃದ್ಧ ಭಕ್ತರೊಬ್ಬರ ತಲೆಯ ಮೇಲೆಯೇ ಲೈಟ್ ಸೆಟ್ ಬಿದ್ದಿದ್ದರಿಂದ ಅವರಿಗೆ ತಕ್ಷಣ ಮೇಲೇಳಲು ಸಾಧ್ಯವಾಗದೆ ಸ್ಥಳದಲ್ಲೇ ಒದ್ದಾಡುವಂತಾಯಿತು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯ ವ್ಯಾಪಾರಿಗಳು ಹಾಗೂ ಇತರೆ ಸಾರ್ವಜನಿಕರು ಧಾವಿಸಿ ಬಂದು, ಬಿದ್ದಿದ್ದ ಭಾರೀ ಲೈಟ್ ಸೆಟ್ ಅನ್ನು ತೆರವುಗೊಳಿಸಿದ್ದಾರೆ.ತೀವ್ರವಾಗಿ ಗಾಯಗೊಂಡು ಒದ್ದಾಡುತ್ತಿದ್ದ ವಯೋವೃದ್ಧರನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ಕೊಡಿಸಲಾಗಿದೆ. ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಸಾವಿರಾರು ಭಕ್ತರು ಶ್ರೀಕ್ಷೇತ್ರಕ್ಕೆ ಹರಿದುಬರುತ್ತಿದ್ದಾರೆ. ಈ ರೀತಿಯ ಜನದಟ್ಟಣೆಯ ಪ್ರದೇಶಗಳಲ್ಲಿ ಅಳವಡಿಸುವ ತಾತ್ಕಾಲಿಕ ಲೈಟಿಂಗ್ ವ್ಯವಸ್ಥೆಗಳು, ಹೋರ್ಡಿಂಗ್ ಹಾಗೂ ಬ್ಯಾನರ್ಗಳ ಸುರಕ್ಷತೆಯ ಬಗ್ಗೆ ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟವರು ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಒತ್ತಾಯ ಕೇಳಿಬಂದಿದೆ.
