ಕೇರಳದ ಅತ್ಯಾಚಾರಿ, ಕೊಲೆ ಆರೋಪಿ ಗೋವಿಂದಚಾಮಿ ಕಣ್ಣೂರು ಜೈಲಿನಿಂದ ಪರಾರಿ: ಭಾರೀ ಭದ್ರತಾ ಲೋಪ!

ಕೇರಳದ ರಾಜ್ಯದ ಅತ್ಯಂತ ಭಯಾನಕ ಆರೋಪಿಗಳಲ್ಲಿ ಒಬ್ಬನಾದ ಗೋವಿಂದಚಾಮಿ ಎಂಬಾತ ಶುಕ್ರವಾರ (ಜುಲೈ 25) ಬೆಳಗಿನ ಜಾವ 1.15ರ ಸುಮಾರಿಗೆ ಬಿಗಿ ಭದ್ರತೆಯುಳ್ಳ ಕಣ್ಣೂರು ಜೈಲಿನಿಂದ ತಪ್ಪಿಸಿಕೊಂಡಿದ್ದು, ಭಾರಿ ಭದ್ರತಾ ವೈಫಲ್ಯ ವರದಿಯಾಗಿದೆ.

ಭಾರಿ ಭದ್ರತಾ ಲೋಪ ಬೆಳಗ್ಗೆ 5 ಗಂಟೆ ಸುಮಾರಿಗೆ ಜೈಲು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಎರಡು ಗಂಟೆಗಳ ಬಳಿಕ ಸ್ಥಳೀಯ ಕಣ್ಣೂರು ಪೊಲೀಸರಿಗೆ ಗೊತ್ತಾಗಿದೆ
ಆರೋಪಿ ಜೈಲಿನಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ವಿದ್ಯುತ್ ಆಫ್ ಆಗಿತ್ತು ಎಂದು ತಿಳಿದುಬಂದಿದೆ.
ಅಂದಹಾಗೆ ಆರೋಪಿ ಗೋವಿಂದಚಾಮಿಗೆ 23 ವರ್ಷದ ಯುವತಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿದೆ. ಈತನನ್ನು ಕಣ್ಣೂರಿನ ಕಾರಾಗೃಹದಲ್ಲಿ ಇರಿಸಲಾಗಿತ್ತು. ಇಂದು ಬೆಳಗಾದಾಗ 25 ಅಡಿಗಳಿಗಿಂತ ಹೆಚ್ಚು ಎತ್ತರವಿರುವ ಜೈಲು ಆವರಣದ ಗೋಡೆಯಿಂದ ಬಟ್ಟೆಯಿಂದ ಮಾಡಿದ ಉದ್ದನೆಯ ಹಗ್ಗ ನೇತಾಡುತ್ತಿರುವುದು ಕಂಡುಬಂದಿತು. ವಿದ್ಯುತ್ ಬೇಲಿಯನ್ನು ಹೊಂದಿರುವ ಬೃಹತ್ ಗೋಡೆಯನ್ನು ಯಾರೋಬ್ಬರ ಸಹಾಯವಿಲ್ಲದೇ ಒಬ್ಬನೇ ಹೇಗೆ ಏರಬಹುದು ಎಂಬ ಪ್ರಶ್ನೆ ಮೂಡಿದೆ. ಈ ಪ್ರಕರಣ ಪೊಲೀಸರನ್ನು ಗೊಂದಲಕ್ಕೆ ದೂಡಿದೆ.
ಕಣ್ಣೂರು ಜೈಲಿನಲ್ಲಿ 68 ಸೆಲ್‌ಗಳನ್ನು ಒಳಗೊಂಡಿರುವ ವಿಶೇಷವಾದ ಹೈ-ಸೆಕ್ಯುರಿಟಿ ಜೈಲು ಇದ್ದು, ಈ ಸೆಲ್‌ಗಳಲ್ಲಿ ಒಂದು ಸೆಲ್ನಿಂದ ಅಪರಾಧಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಕಣ್ಣೂರಿನ ಎಲ್ಲ ಉನ್ನತ ಪೊಲೀಸ್ ಅಧಿಕಾರಿಗಳು ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ ಮತ್ತು ರಾಜ್ಯ ಪೊಲೀಸ್ ಮುಖ್ಯಸ್ಥ ರೇವದ ಚಂದ್ರಶೇಖರ್ ಅವರು ಆರೋಪಿಯನ್ನು ಆದಷ್ಟು ಬೇಗ ಹಿಡಿಯಬೇಕೆಂದು ಸೂಚನೆ ನೀಡಿದ್ದು, ಪ್ರಸ್ತುತ ಶೋಧ ಕಾರ್ಯಾಚರಣೆಯ ಮೇಲ್ವಿಚಾರಣೆಯನ್ನು ನಡೆಸುತ್ತಿದ್ದಾರೆ.
2011ರ ಫೆಬ್ರವರಿ 1ರಂದು ಆರೋಪಿ ಗೋವಿಂದಚಾಮಿ, ಶೋರನೂರು ಮೂಲದ 23 ವರ್ಷದ ಸೌಮ್ಯಾಳನ್ನು ಎರ್ನಾಕುಲಂ-ಶೋರನೂರು ಪ್ಯಾಸೆಂಜರ್ ರೈಲಿನಲ್ಲಿ ಸುಲಿಗೆ ಮಾಡಿ, ಆಕೆಯನ್ನು ರೈಲಿನಿಂದ ತಳ್ಳಿ ಕೊಲೆ ಮಾಡಿದ್ದಾನೆ ಎಂಬ ಫಾಸ್ಟ್ ಟ್ರ್ಯಾಕ್ ನ್ಯಾಯಾಲಯದ ತೀರ್ಪನ್ನು ಕೇರಳ ಹೈಕೋರ್ಟ್ 2013ರ ಡಿಸೆಂಬರ್ ತಿಂಗಳಲ್ಲಿ ಎತ್ತಿಹಿಡಿದಿತ್ತು. ಘಟನೆಯ ಸಂದರ್ಭದಲ್ಲಿ ಸೌಮ್ಯಳ ಮೇಲೆ ಅತ್ಯಾಚಾರ ಎಸಗಿ, ಕ್ರೂರವಾಗಿ ಹಲ್ಲೆ ಮಾಡಲಾಗಿತ್ತು. ಬಳಿಕ, ಸೌಮ್ಯಾಳನ್ನು ರೈಲ್ವೆ ಪೊಲೀಸರು ಹಳಿಯ ಬಳಿ ಪತ್ತೆ ಮಾಡಿದರು. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾದೇ 2011, ಫೆಬ್ರವರಿ 6ರಂದು ತ್ರಿಶೂರ್‌ನ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೌಮ್ಯ ಮೃತಪಟ್ಟರು.
ಘಟನಾ ಸಮಯದಲ್ಲೇ ಆರೋಪಿ ಗೋವಿಂದಚಾಮಿ, ತಮ್ಮ ಹುಟ್ಟೂರಾದ ತಮಿಳುನಾಡಿನಲ್ಲಿ ಅಷ್ಟರಲ್ಲಾಗಲೇ ಎಂಟು ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದರು. 2012ರಲ್ಲಿ ತ್ವರಿತ ನ್ಯಾಯಾಲಯವು ಆರೋಪಿಗೆ ಮರಣದಂಡನೆ ಶಿಕ್ಷೆ ವಿಧಿಸಿತು. ಆರೋಪಿಯನ್ನು ರೂಢಿಗತ ಅಪರಾಧಿ ಪರಿಗಣಿಸಿ ಕಠಿಣ ಶಿಕ್ಷೆಯನ್ನು ನೀಡಿತು. ಅಪರಾಧದ ಸ್ವರೂಪವು ತುಂಬಾ ಘೋರವಾಗಿದ್ದು, ಸಮಾಜವನ್ನೇ ಬೆಚ್ಚಿಬೀಳಿಸಿದೆ ಎಂದು ನ್ಯಾಯಾಲಯ ತೀರ್ಪು ನೀಡಿತು. ಇದಾದ ಎರಡು ವರ್ಷಗಳ ಬಳಿಕ ಕೇರಳದ ಹೈಕೋರ್ಟ್ ಈ ತೀರ್ಪನ್ನು ಎತ್ತಿಹಿಡಿಯಿತು. ಇದಾದ ಬಳಿಕ ಆರೋಪಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದ. ಆತನ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣವನ್ನು ಕೈಬಿಟ್ಟ ಹಿನ್ನೆಲೆಯಲ್ಲಿ 2016ರಲ್ಲಿ ಸುಪ್ರೀಂಕೋರ್ಟ್ ಮರದಂಡನೆ ಶಿಕ್ಷೆಯನ್ನು ಕೈಬಿಟ್ಟು ಜೀವವಾಧಿ ಶಿಕ್ಷೆಯನ್ನು ಎತ್ತಿಹಿಡಿದಿತ್ತು.
ಕಣ್ಣೂರು ಜೈಲಿನಲ್ಲಿದ್ದ ಆರೋಪಿ ಇದೀಗ ಅಲ್ಲಿಂದ ಪರಾರಿಯಾಗಿದ್ದು, ಈ ವಿಚಾರವಾಗಿ ಸೌಮ್ಯ ಅವರ ತಾಯಿ ಬೇಸರ ಹೊರಹಾಕಿದ್ದಾರೆ. ಎಲ್ಲ ಸಿಸಿಟಿವಿ ಪ್ರೋಟೋಕಾಲ್‌ಗಳನ್ನು ಹೊಂದಿರುವ ಹೆಚ್ಚಿನ ಭದ್ರತೆಯ ಜೈಲಿನಲ್ಲಿ ಇದು ಹೇಗೆ ಸಂಭವಿಸಲು ಸಾಧ್ಯ. ಇದರರ್ಥ ಆರೋಪಿಗೆ ಕೆಲವರಿಂದ ಸಹಾಯ ಸಿಕ್ಕಿದೆ ಎಂದೆನಿಸುತ್ತಿದೆ. ಬಹುಶಃ ಇದು ಖಿನ್ನತೆಗೆ ಕಾರಣವಾಗಬಹುದು ಎಂದು ಸೌಮ್ಯಾ ತಾಯಿ ಹೇಳಿದ್ದಾರೆ.
2011ರಲ್ಲಿ ಈ ಭಯಾನಕ ಆರೋಪಿಯನ್ನು ಸೆರೆಹಿಡಿದ ಪೊಲೀಸ್ ಅಧಿಕಾರಿ ಅಶ್ರಫ್ ಮಾತನಾಡಿದ್ದು, ಈ ರೂಢಿಗತ ಅಪರಾಧಿ ಜೈಲಿನಿಂದ ಜಿಗಿಯುತ್ತಾನೆ ಎಂದು ತಾನು ಯಾವಾಗಲೂ ಭಯಪಡುತ್ತಿದ್ದೆ. ಅದೇ ರೀತಿ ಆಗಿದೆ ಎಂದಿದ್ದಾರೆ. ಇದೇ ವಿಚಾರವಾಗಿ ಮಾಜಿ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಸರ್ಕಾರ ಮತ್ತು ಪೊಲೀಸರ ಮೇಲೆ ಕಟುವಾದ ಮಾತುಗಳಿಂದ ದಾಳಿ ನಡೆಸಿದ್ದಾರೆ. ಇಲ್ಲಿ ಅಪರಾಧಿ ಜೈಲಿನಿಂದ ಜಿಗಿದಿಲ್ಲ ಬದಲಾಗಿ, ಆತ ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ ಎಂದಿದ್ದಾರೆ.