ಕಾಸರಗೋಡು: ಕೆಎಸ್ಸಾರ್ಟಿಸಿ ಬಸ್ ಮತ್ತು ಕಾರು ನಡುವೆ ಭೀಕರ ಅಪಘಾ*ತ

ಕಾಸರಗೋಡಿನ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ನೆಲ್ಲಿಕಟ್ಟೆ ಸಮೀಪ ಶನಿವಾರ ಮುಂಜಾನೆ ಕೆಎಸ್ಸಾರ್ಟಿಸಿ ಬಸ್ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದೆ. ನೆಲ್ಲಿಕಟ್ಟೆಯಿಂದ ಕಾಸರಗೋಡು ರೈಲು ನಿಲ್ದಾಣಕ್ಕೆ ತೆರಳುತ್ತಿದ್ದ ಕಾರು ಹಾಗೂ ಕಾಸರಗೋಡಿನಿಂದ ಪುತ್ತೂರಿಗೆ ಸಾಗುತ್ತಿದ್ದ ಕರ್ನಾಟಕ ಸಾರಿಗೆ ಬಸ್ ಮುಖಾಮುಖಿ ಢಿಕ್ಕಿಯಾಗಿವೆ.

ಈ ಘಟನೆಯಲ್ಲಿ ಕಾರು ಚಾಲಕ, 68 ವರ್ಷದ ಸಂಶುದ್ದೀನ್ ಅವರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಅವರ ಮಗ ಸಲ್ಮಾನ್ ಹಾರಿಸ್ (22) ತೀವ್ರವಾಗಿ ಗಾಯಗೊಂಡಿದ್ದು, ಪ್ರಸ್ತುತ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬದಿಯಡ್ಕ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.