ಕನ್ನಡಿಗ ಚಂದ್ರಮೌಳಿ ಕೊಲೆ: ‘ಗೌರವಾನ್ವಿತ ವ್ಯಕ್ತಿ’ ಎಂದ ಟ್ರಂಪ್; ಕೊಲೆಗಾರನಿಗೆ ಕಠಿಣ ಶಿಕ್ಷೆಯ ಭರವಸೆ

ನ್ಯೂಯಾರ್ಕ್: ತಾವು ಕೆಲಸ ಮಾಡುತ್ತಿದ್ದ ಅಮೆರಿಕದ ಹೊಟೇಲ್‌ನಲ್ಲಿ ಕ್ಷುಲ್ಲಕ ಕಾರಣಕ್ಕೆ ಕ್ಯೂಬಾ ಮೂಲದ ಸಹೋದ್ಯೋಗಿಯಿಂದ ಭೀಕರವಾಗಿ ಕೊಲೆಯಾಗಿದ್ದ ಕನ್ನಡಿಗ ಚಂದ್ರಮೌಳಿ ಬಾಬ್ ನಾಗಮಲ್ಲಯ್ಯ ಅವರ ಬಗ್ಗೆ ಇದೇ ಮೊದಲ ಬಾರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಶಿರಚ್ಛೇದಕ್ಕೊಳಗಾದ ಬಾಬ್‌ರನ್ನು ‘ಗೌರವಾನ್ವಿತ ವ್ಯಕ್ತಿ’ ಎಂದಿರುವ ಅವರು, ಕೊಲೆಗಾರನಿಗೆ ಕಠಿಣಾತಿಕಠಿಣ ಶಿಕ್ಷೆ ಕೊಡಿಸುವ ಭರವಸೆ ನೀಡಿದ್ದಾರೆ.

ಇದೇ ವೇಳೆ ವಲಸಿಗರ ವಿರುದ್ಧ ಕಿಡಿ ಕಾರಿರುವ ಟ್ರಂಪ್, ‘ಈಗಾಗಲೇ ಹಲವಾರು ಅಪರಾಧ ಕೃತ್ಯಗಳನ್ನೆಸಗಿ ಗಡೀಪಾರಾಗಿದ್ದರೂ ಹಿಂದಿನ ಜೋ ಬೈಡನ್ ಸರ್ಕಾರದ ಅಸಮರ್ಥತೆಯಿಂದಾಗಿ ಇಲ್ಲೇ ಉಳಿದುಕೊಂಡಿದ್ದ. ಆದರೆ ನನ್ನ ಅವಧಿಯಲ್ಲಿ ಹೀಗಾಗದು. ಆದ್ದರಿಂದಲೇ ನಾವು ಕ್ರಿಮಿನಲ್ ಅಕ್ರಮ ವಲಸಿಗರನ್ನು ಹಿಡಿದು ಉಗಾಂಡಾ ಮತ್ತು ದಕ್ಷಿಣ ಸುಡಾನ್‌ನಂತಹ ದೇಶಗಳಿಗೆ ಕಳಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.