ಗುರುವಾಯೂರು ದೇವಸ್ಥಾನದ ಪವಿತ್ರ ಕೊಳದಲ್ಲಿ ಕಾಲು ತೊಳೆದ ಜಾಸ್ಮಿನ್ ಜಾಫರ್ – ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿವಾದ

ಕೇರಳ: ಕೇರಳದ ಪುಣ್ಯಕ್ಷೇತ್ರ ಹಾಗೂ ಪ್ರಸಿದ್ಧ ದೇವಾಲಯ ಗುರುವಾಯೂರು ದೇವಸ್ಥಾನದ ಕೊಳಕ್ಕೆ ಅಪಚಾರ ಮಾಡಲಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಮಲಯಾಳಂನ ಮಾಜಿ ಬಿಗ್ ಬಾಸ್ ಸ್ಪರ್ಧಿ ಜಾಸ್ಮಿನ್ ಜಾಫರ್ ಅವರು ಗುರುವಾಯೂರು ದೇವಸ್ಥಾನದ ಕೊಳದಲ್ಲಿ ಕಾಲು ತೊಳೆದಿರುವ ಬಗ್ಗೆ ಇದೀಗ ವಿವಾದ ಸೃಷ್ಟಿಸಿದೆ. ಈ ವಿಡಿಯೋದಲ್ಲಿ ಜಾಫರ್ ದೇವಾಲಯದ ಪವಿತ್ರ ಕೊಳದಲ್ಲಿ ತನ್ನ ಪಾದಗಳನ್ನು ತೊಳೆಯುತ್ತಿರುವುದನ್ನು ಕಾಣಬಹುದು. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಗೂ ಕೇರಳದ ಹಿಂದೂ ಧಾರ್ಮಿಕ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇವಾಲಯದ ಶಿಷ್ಟಾಚಾರಗಳನ್ನು ಉಲ್ಲಂಘಿಸಿದ್ದಾರೆ ಎಂದು ಇಲ್ಲಿನ ಅಧಿಕಾರಿಗಳು ಹೇಳಿದ್ದಾರೆ.

ಈ ವಿಡಿಯೋವನ್ನು ಜಾಸ್ಮಿನ್ ಜಾಫರ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳುತ್ತಿದ್ದಂತೆ ದೇವಾಲಯದ ಆಡಳಿತ ಮಂಡಳಿ ಹಾಗೂ ಹಿಂದೂ ನಾಯಕರು ಅಕ್ರೋಶ ಹೊರಹಾಕಿದ್ದಾರೆ. ಇನ್ನು ಜಾಸ್ಮಿನ್ ಜಾಫರ್ ಸೋಶಿಯಲ್ ಮೀಡಿಯಾ ಇನ್ಫ್ಲ್ಯುಯೆನ್ಸರ್, 2025ರ ಮಲಯಾಳಂನ ಬಿಗ್ ಬಾಸ್ ಸ್ಪರ್ಧಿಯಾಗಿ ಖ್ಯಾತಿ ಗಳಿಸಿದರು. ಅವರದೇ ಆಗಿರುವ ಯೂಟ್ಯೂಬ್ ಚಾನೆಲ್ನಲ್ಲಿ ಅನೇಕ ವಿಚಾರದ ಬಗ್ಗೆ ಹಂಚಿಕೊಳ್ಳುತ್ತಿದ್ದರು. ತಮ್ಮ ಚಾನೆಲ್ ಮೂಲಕ ಜೀವನಶೈಲಿ, ಸೌಂದರ್ಯದ ಬಗ್ಗೆ ಟಿಪ್ಸ್ಗಳನ್ನು ನೀಡುತ್ತಿದ್ದರು. ಜಾಸ್ಮಿನ್ ಜಾಫರ್ ತಮ್ಮ ಯೂಟ್ಯೂಬ್‌ನಲ್ಲಿ 1.5 ಮಿಲಿಯನ್‌ಗಿಂತಲೂ ಹೆಚ್ಚು ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕೂಡ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಇವರು ಬಿಗ್ ಬಾಸ್ ಮಲಯಾಳಂ ಸೀಸನ್ 6 ರಲ್ಲಿ ಭಾಗವಹಿಸಿದ ನಂತರ ಇವರ ಜನಾಪ್ರಿಯತೆ ಇನ್ನು ಹೆಚ್ಚಾಗಿದೆ.
ಈ ವಿಡಿಯೋ ಭಾರೀ ವಿರೋಧಗಳು ವ್ಯಕ್ತವಾದ ನಂತರ ವಿಡಿಯೋವನ್ನು ಡಿಲೀಟ್ ಮಾಡಿ, ಕ್ಷಮೆಯನ್ನು ಕೇಳಿದ್ದಾರೆ. ನಿರ್ಬಂಧಗಳ ಬಗ್ಗೆ ತನಗೆ ತಿಳಿದಿಲ್ಲ, ಯಾರನ್ನೂ ನೋಯಿಸುವುದು ಅಥವಾ ವಿವಾದವನ್ನು ಸೃಷ್ಟಿಸುವುದು ಉದ್ದೇಶವಾಗಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ. “ನನ್ನನ್ನು ಪ್ರೀತಿಸುವವರಿಗೆ ಮತ್ತು ಇತರ ಎಲ್ಲರಿಗೂ, ನಾನು ಮಾಡಿದ ವೀಡಿಯೊ ದುಃಖವನ್ನುಂಟುಮಾಡಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಅಜ್ಞಾನದಿಂದ ಸಂಭವಿಸಿದ ತಪ್ಪಿಗೆ ನಾನು ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತೇನೆ” ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಅಲ್ಲಿನ ಆಡಳಿತ ಮಂಡಳಿ, ಕೊಳ ಅಪವಿತ್ರವಾಗಿರುವುದರಿಂದ ಅದನ್ನು ಶುದ್ಧೀಕರಣ ಮಾಡಿದ್ದಾರೆ ಎಂದು ಹೇಳಲಾಗಿದೆ. ದೇವಾಲಯದ ಆಡಳಿತಾಧಿಕಾರಿ ಒಬಿ ಅರುಣ್ ಕುಮಾರ್ ಅವರು ದೇವಾಲಯದ ಪೊಲೀಸರಿಗೆ ಔಪಚಾರಿಕ ದೂರು ದಾಖಲಿಸಿದ್ದು, ಚಿತ್ರೀಕರಣವು ದೇವಾಲಯದ ಶಿಷ್ಟಾಚಾರಗಳನ್ನು ಉಲ್ಲಂಘಿಸುತ್ತದೆ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತದೆ ಎಂದು ಹೇಳಿದ್ದಾರೆ. ನ್ಯಾಯಾಲಯದ ಆದೇಶದ ಅಡಿಯಲ್ಲಿ ದೇವಾಲಯದ ಕಾರಿಡಾರ್‌ನಲ್ಲಿ ಚಿತ್ರೀಕರಣವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ಪೂರ್ವ ಲಿಖಿತ ಅನುಮತಿಯಿಲ್ಲದೆ ದೇವಾಲಯದ ಕೊಳದಲ್ಲಿ ಛಾಯಾಗ್ರಹಣ ಅಥವಾ ವೀಡಿಯೊಗ್ರಫಿಯನ್ನು ನಿಷೇಧಿಸಲಾಗಿದೆ ಎಂದು ಹೇಳಿದ್ದಾರೆ.