ಇಸ್ರೇಲ್ ವಾಯುದಾಳಿ: ಲೆಬನಾನ್ ಪತ್ರಕರ್ತೆ ಅಮಲ್ ಖಲೀಲ್ ಸಾವು

ಬೈರೂತ್: ದಕ್ಷಿಣ ಲೆಬನಾನ್ ನಲ್ಲಿ ಇಸ್ರೇಲ್ ನಡೆಸಿದ ವಾಯುದಾಳಿಯಲ್ಲಿ ಲೆಬನಾನಿನ ಪತ್ರಕರ್ತೆ ಅಮಲ್ ಖಲೀಲ್ ಮೃತಪಟ್ಟಿದ್ದಾರೆ ಎಂದು ಲೆಬನಾನಿನ ರಾಷ್ಟ್ರೀಯ ಸುದ್ದಿ ಸಂಸ್ಥೆ ದೃಢಪಡಿಸಿದೆ
ದಾಳಿಯ ನಂತರ ಅವಶೇಷಗಳಡಿ ಅಮಲ್ ಅವರ ಮೃತದೇಹ ಪತ್ತೆಯಾಗಿದೆ ಎಂದು ರಾಯಿಟರ್ಸ್ ಉಲ್ಲೇಖಿಸಿ ಲೆಬನಾನಿನ ಹಿರಿಯ ಸೈನಿಕ ಅಧಿಕಾರಿ ತಿಳಿಸಿದ್ದಾರೆ. ಆಶ್ರಯ ಪಡೆದಿದ್ದ ಮನೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಲೆಬನಾನಿನ ಆರೋಗ್ಯ ಸಚಿವಾಲಯ ತಿಳಿಸಿದೆ.
ಈ ದಾಳಿಯಲ್ಲಿ ಅಮಲ್ ಜೊತೆಗೆ ಮತ್ತೊಬ್ಬ ಪತ್ರಕರ್ತೆ ಝನಬ್ ಫರಾಝ್ ಕೂಡ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಪತ್ರಕರ್ತರನ್ನು ಗುರಿಯಾಗಿಸಿಕೊಂಡಿಲ್ಲ ಎಂದು ಇಸ್ರೇಲ್ ಪ್ರತಿಕ್ರಿಯಿಸಿದೆ.
ಘಟನೆಯನ್ನು ಖಂಡಿಸಿರುವ ಲೆಬನಾನಿನ ಪ್ರೆಸ್ ಕ್ಲಬ್, “ತಾನು ನಂಬಿದ ಕಾರಣಕ್ಕಾಗಿ ಅಮಲ್ ತಮ್ಮ ಜೀವವನ್ನೇ ಬಲಿಕೊಟ್ಟಿದ್ದಾರೆ” ಎಂದು ಹೇಳಿಕೆ ನೀಡಿದೆ. ಪತ್ರಕರ್ತರು ಮತ್ತು ಮಾಧ್ಯಮ ಸಿಬ್ಬಂದಿಯನ್ನು ಉದ್ದೇಶಪೂರ್ವಕವಾಗಿ ಗುರಿಯಾಗಿಸುವ ಅಭಿಯಾನದ ಭಾಗವಾಗಿಯೇ ಈ ದಾಳಿ ನಡೆದಿದೆ ಎಂದು ಪ್ರೆಸ್ ಕ್ಲಬ್ ಆರೋಪಿಸಿದೆ.
ಲೆಬನಾನಿನ ಮಾಹಿತಿ ಸಚಿವ ಪಾಲ್ ಮೊರ್ಕೋಸ್, “ಪತ್ರಕರ್ತರನ್ನು ಗುರಿಯಾಗಿಸುವುದು ಘೋರ ಅಪರಾಧ. ಇದು ಅಂತರರಾಷ್ಟ್ರೀಯ ಮಾನವೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾರ್ಚ್ ಆರಂಭದಿಂದ ಇಸ್ರೇಲ್ ದಾಳಿಗಳಲ್ಲಿ ಲೆಬನಾನ್ನಲ್ಲಿ ಕನಿಷ್ಠ ಐದು ಪತ್ರಕರ್ತರು ಸಾವನ್ನಪ್ಪಿರುವುದಾಗಿ ವರದಿಗಳು ತಿಳಿಸಿವೆ.
