ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ಮೊಬೈಲ್ ಕಳ್ಳತನ; ಜಾರ್ಖಂಡ್‌ನ ಅಂತರರಾಜ್ಯ ಗ್ಯಾಂಗ್ ಭೇದಿಸಿದ ಪೊಲೀಸರು

ಬೆಂಗಳೂರು: ಐಪಿಎಲ್ ಕ್ರಿಕೆಟ್ ಪಂದ್ಯದ ವೇಳೆ ಅಭಿಮಾನಿಗಳ ಸಂಭ್ರಮವನ್ನೇ ಬಂಡವಾಳ ಮಾಡಿಕೊಂಡು ಮೊಬೈಲ್ ಲಪಟಾಯಿಸುತ್ತಿದ್ದ ಜಾರ್ಖಂಡ್ ಮೂಲದ ಅಂತರರಾಜ್ಯ ಕಳ್ಳರ ಜಾಲವನ್ನು ಕಬ್ಬನ್ ಪಾರ್ಕ್ ಪೊಲೀಸರು ಯಶಸ್ವಿಯಾಗಿ ಬೇಧಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, 18 ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದ್ದು, ಒಟ್ಟು 51 ಬೆಲೆಬಾಳುವ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿದೆ.

ಆರ್‌ಸಿಬಿ ಹಾಗೂ ಎಸ್‌ಆರ್‌ಎಚ್ (RCB vs SRH) ನಡುವಿನ ಹೈವೋಲ್ಟೇಜ್ ಪಂದ್ಯದ ವೇಳೆ ಈ ಕಳ್ಳತನ ನಡೆದಿದೆ. ಬಂಧಿತ ಮಾಸ್ಟರ್‌ಮೈಂಡ್ ಶುಭಮ್, ಜಾರ್ಖಂಡ್‌ನಿಂದ 18 ಅಪ್ರಾಪ್ತ ಬಾಲಕರನ್ನು ಕರೆತಂದು ಈ ಕೃತ್ಯಕ್ಕೆ ಬಳಸಿಕೊಂಡಿದ್ದ. ಅಭಿಮಾನಿಗಳಂತೆ ಕಾಣಲು ಇವರೆಲ್ಲರೂ ಕಡ್ಡಾಯವಾಗಿ ಆರ್‌ಸಿಬಿ ತಂಡದ ಜೆರ್ಸಿ (T-shirt) ಧರಿಸುತ್ತಿದ್ದರು. ಅಭಿಮಾನಿಗಳಿಂದ ಟಿಕೆಟ್ ಕಸಿದುಕೊಂಡು ಅಥವಾ ಕಳ್ಳತನ ಮಾಡಿ ಕ್ರೀಡಾಂಗಣ ಪ್ರವೇಶಿಸುತ್ತಿದ್ದ ಈ ಗ್ಯಾಂಗ್, ಜನಜಂಗುಳಿಯ ನಡುವೆ ಕೈಚಳಕ ತೋರುತ್ತಿತ್ತು.
ತನಿಖೆಯ ವೇಳೆ ಆಘಾತಕಾರಿ ಅಂಶಗಳು ಬೆಳಕಿಗೆ ಬಂದಿದ್ದು, ಈ ಗ್ಯಾಂಗ್ ಕಳ್ಳತನ ಮಾಡಲೆಂದೇ ಜಾರ್ಖಂಡ್‌ನಿಂದ ಬೆಂಗಳೂರಿಗೆ ವಿಮಾನದ ಮೂಲಕ ಆಗಮಿಸಿತ್ತು. ಮಾಸ್ಟರ್‌ಮೈಂಡ್ ಶುಭಮ್, ಬಾಲಕರಿಗೆ ತಲಾ 5,000 ರೂಪಾಯಿ ಕೂಲಿ ನೀಡುತ್ತಿದ್ದಲ್ಲದೆ, ಪಂದ್ಯದ ವೇಳೆ ಕನಿಷ್ಠ 5 ಮೊಬೈಲ್ ಕದಿಯಲೇಬೇಕು ಎಂಬ ‘ಟಾರ್ಗೆಟ್’ ಕೂಡ ನೀಡುತ್ತಿದ್ದ ಎನ್ನಲಾಗಿದೆ. ಕದ್ದ ತಕ್ಷಣ ಮೊಬೈಲ್‌ಗಳನ್ನು ಸ್ವಿಚ್ ಆಫ್ ಮಾಡಿ ಸಂಕೇತಗಳ ಮೂಲಕ ಪರಸ್ಪರ ವರ್ಗಾಯಿಸುತ್ತಿದ್ದರು.
ಕಳೆದ ಪಂದ್ಯದ ವೇಳೆ ಸ್ಟೇಡಿಯಂನ ಗೇಟ್ ಸಂಖ್ಯೆ 1, 2 ಮತ್ತು ಗ್ಯಾಲರಿಗಳಲ್ಲಿ ಅತಿ ಹೆಚ್ಚು ಮೊಬೈಲ್ ಕಳ್ಳತನವಾಗಿರುವ ಬಗ್ಗೆ ದೂರುಗಳು ದಾಖಲಾಗಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಡಿಸಿಪಿ ಶೇಖರ್ ಹೆಚ್.ಟಿ. ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ವಶಪಡಿಸಿಕೊಂಡ 51 ಮೊಬೈಲ್‌ಗಳ ಒಟ್ಟು ಮೌಲ್ಯ ಸುಮಾರು 18 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬನ್ ಪಾರ್ಕ್ ಠಾಣೆಯಲ್ಲಿ 29ಕ್ಕೂ ಹೆಚ್ಚು ಎಫ್‌ಐಆರ್ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.