ತರಗತಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗೆ ಅವಮಾನ: ವಿಡಿಯೋ ವೈರಲ್ ಬೆನ್ನಲ್ಲೇ ಕಠಿಣ ಕ್ರಮ.

ಬೆಂಗಳೂರು: ಪಿಇಎಸ್ ವಿಶ್ವವಿದ್ಯಾಲಯನಲ್ಲಿ ಪ್ರೊಫೆಸರ್ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಬನಶಂಕರಿ ರಿಂಗ್ ರೋಡ್‌ನಲ್ಲಿರುವ ಕ್ಯಾಂಪಸ್‌ನಲ್ಲಿ ಪಾಠ ಮಾಡುತ್ತಿದ್ದ ವೇಳೆ ಕೋಪಗೊಂಡ ಪ್ರೊಫೆಸರ್ ಡಾ. ಮೂರಳಿಧರ ದೇಶಪಾಂಡೆ ತರಗತಿಯಲ್ಲಿದ್ದ ಮುಸ್ಲಿಂ ವಿದ್ಯಾರ್ಥಿಯನ್ನು ‘ಭಯೋತ್ಪಾದಕ’ ಎಂದು ಕರೆದು ಅವಮಾನಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಘಟನೆ ಎರಡು ದಿನಗಳ ಹಿಂದೆ ನಡೆದಿದೆ.
ಪಾಠದ ಮಧ್ಯದಲ್ಲಿ ಮಕ್ಕಳ ಗಲಾಟೆಯಿಂದಲೋ ಏನೋ ದೇಶಪಾಂಡೆ ಗರಂ ಆಗಿದ್ದು, ನೀವೆಲ್ಲಾ ಭಯೋತ್ಪಾದಕರು ಎಂದೆಲ್ಲಾ ನಿಂದಿಸಿದ್ದಾರೆ. ಇದೇ ವೇಳೆ ತರಗತಿಯಲ್ಲಿ ಕುಳಿತಿದ್ದ ವಿದ್ಯಾರ್ಥಿಗಳು ತಮ್ಮ ಮೊಬೈಲ್ನಲ್ಲಿ ಘಟನೆಯನ್ನು ಸೆರೆ ಹಿಡಿದಿದ್ದಾರೆ. ಇದೇ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಆಕ್ರೋಶಕ್ಕೆ ಕಾರಣವಾಗಿದೆ. ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ ಈ ಬಗ್ಗೆ ದೂರು ದಾಖಲಿಸಿದೆ. ಪ್ರಕರಣದ ಗಂಭೀರತೆಯನ್ನು ಗಮನಿಸಿದ ವಿಶ್ವವಿದ್ಯಾಲಯ ಆಡಳಿತವು ತಕ್ಷಣ ಕ್ರಮ ಕೈಗೊಂಡು ಪ್ರೊಫೆಸರ್ ಅವರನ್ನು ಅಮಾನತು ಮಾಡಿದೆ.
