ಯೂರೋಪ್ನಲ್ಲಿ ಉತ್ಪಾದನೆಯಾಗಲಿದೆ ಭಾರತದ ಮೊದಲ ಎಐ ಯುದ್ಧವಿಮಾನ ‘ಕಾಲಭೈರವ’!

ಹೊಸದಿಲ್ಲಿ: ಮೇಕ್ ಇನ್ ಇಂಡಿಯಾ ಉತ್ಪನ್ನಗಳು ಜಾಗತಿಕವಾಗುತ್ತಿರುವ ಸಂಕೇತವಾಗಿ ಭಾರತದ ಮೊಟ್ಟಮೊದಲ ಎಐ ಯುದ್ಧವಿಮಾನ ಕಾಲಭೈರವ ಇದೀಗ ಯೂರೋಪ್ನಲ್ಲಿ ಉತ್ಪಾದನೆಯಾಗುತ್ತಿದೆ.
ಎಫ್-16 ಯುದ್ಧವಿಮಾನಗಳಿಗೆ ಅತ್ಯಾಧುನಿಕ ಯುದ್ಧವಿಮಾನ ಸಿಮ್ಯುಲೇಶನ್ ಸಿಸ್ಟಮ್ ಉತ್ಪಾದಿಸುವಲ್ಲಿ ಅಗ್ರಗಣ್ಯ ಕಂಪೆನಿ ಎನಿಸಿದ ಯೂರೋಪ್ ಕಂಪನಿಯ ಸಹಯೋಗದಲ್ಲಿ ಪೋರ್ಚುಗಲ್ ನಲ್ಲಿ ಈ ವಿಮಾನ ನಿರ್ಮಾಣವಾಗುತ್ತಿದೆ ಎಂದು ಭಾರತದ ಎಐ ಯುದ್ಧರಂಗ ಕಂಪನಿಯಾದ ಎಫ್ಡಬ್ಲ್ಯುಡಿಎ ಪ್ರಕಟಿಸಿದೆ.
ಉಭಯ ಕಂಪಪೆನಿಗಳ ನಡುವಿನ ಒಪ್ಪಂದದ ಅನ್ವಯ, SKETCHPIXEL ಈ ಅತ್ಯಾಧುನಿಕ ಯುದ್ಧವಿಮಾನಕ್ಕೆ ಸಿಮ್ಯುಲೇಶನ್ ತಂತ್ರಜ್ಞಾನ, ಎಐ ಸಮನ್ವಯ, ಸಂವಹನ ವ್ಯವಸ್ಥೆ ಮತ್ತು ಅಂತರ್ ಕಾರ್ಯಾಚರಣೆ ಸಾಮರ್ಥ್ಯಗಳನ್ನು ಸೃಷ್ಟಿಸಲಿದೆ. ಎಫ್ಡಬ್ಲ್ಯುಡಿಎ ಪ್ರಮುಖ ಸ್ವಯಂಚಾಲಿತ ವ್ಯವಸ್ಥೆ ಮತ್ತು ವಿಮಾನ ಚೌಕಟ್ಟು ವಿನ್ಯಾಸದ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಉಳಿಸಿಕೊಳ್ಳಲಿದೆ.

ಕಾಲಭೈರವ ಯುದ್ಧವಿಮಾನವು ಮಧ್ಯಮ ಎತ್ತರ ಮತ್ತು ಸುಧೀರ್ಘ ದೂರ ಸಾಮರ್ಥ್ಯದ ಸ್ವಯಂಚಾಲಿತ ವಿಮಾನವಾಗಿದ್ದು, 3000 ಕಿಲೋಮೀಟರ್ ಸಾಮರ್ಥ್ಯ ಹಾಗೂ 30 ಗಂಟೆಗಳಿಗೂ ಅಧಿಕ ಕಾಲ ನಿರಂತರವಾಗಿ ಪ್ರಯಾಣಿಸುವ ಸಾಮರ್ಥ್ಯ ಹೊಂದಿರುತ್ತದೆ;. ಈ ಪ್ಲಾಟ್ಫಾರಂ ಎಐ-ಚಾಲಿತ ಗುರಿ ಗುರುತಿಸುವಿಕೆ, ನಿಖರ ಸಮನ್ವಯ ಸಾಮರ್ಥ್ಯ ಮತ್ತು ಎನ್ಕ್ರಿಪ್ಟೆಡ್ ಸಂವಹನ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ಅಧಿಕ ವೆಚ್ಚದ ಪ್ಲಾಟ್ಫಾರಂಗಳನ್ನು ಹೊಂದುವ ಸಾಂಪ್ರದಾಯಿಕ ವೈಮಾನಿಕ ಮಾದರಿಗಳಿಗಿಂತ ಭಿನ್ನವಾಗಿ, ಈ ಎಐ ಯುದ್ಧರಂಗ ಕಂಪನಿಯು ಸ್ವಯಂಚಾಲಿತ ಪವನಶಕ್ತಿ ವ್ಯವಸ್ಥೆಯನ್ನು ಮುಂದಿನ ಪೀಳಿಗೆಯ ವಾಯುರಕ್ಷಣಾ ವ್ಯವಸ್ಥೆಗಾಗಿ ಅಭಿವೃದ್ಧಿಪಡಿಸುತ್ತಿದೆ ಎಂದು ಸಿಇಓ ಸುಹಾಸ್ ತೇಜಸ್ಕಂದ ಹೇಳಿದ್ದಾರೆ.