ಏಕಕಾಲದಲ್ಲಿ ಎರಡು ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯ ಮೂಲದ ಟೆಕ್ಕಿಗೆ 15 ವರ್ಷ ಜೈಲು ಶಿಕ್ಷೆ!

ವಾಷಿಂಗ್ಟನ್: ಅಮೆರಿಕದಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದುಕೊಂಡು ಒಂದೇ ಅವಧಿಯಲ್ಲಿ ಎರಡೆರಡು ಕಂಪನಿಗಳಿಗೆ ಕೆಲಸ ಮಾಡುತ್ತಾ ತಿಂಗಳಿಗೆ 40 ಲಕ್ಷ ರೂ.ಗಳಷ್ಟು ದುಡಿಯುತ್ತಿದ್ದ ಭಾರತ ಮೂಲದ ಇಂಜಿನಿಯರ್ ಗೆ 15 ವರ್ಷ ಜೈಲು ಶಿಕ್ಷೆ ಪ್ರಕಟಿಸಲಾಗಿದೆ. ಅವರ ಹೆಸರು ಮೆಹುಲ್ ಗೋಸ್ವಾಮಿ (39).

ಏಕಕಾಲದಲ್ಲಿ ಎರಡು ಕಡೆ ಕೆಲಸ ಮಾಡುತ್ತಿದ್ದ ಆರೋಪದ ಮೇರೆಗೆ ಇದೇ ಆಗಸ್ಟ್ ನಲ್ಲಿ ಅವರನ್ನು ಬಂಧಿಸಲಾಗಿತ್ತು. ಅವರು ನ್ಯೂಯಾರ್ಕ್ ನಲ್ಲಿ ವಾಸಿಸುತ್ತಿದ್ದರು. ನ್ಯೂಯಾರ್ಕ್ ರಾಜ್ಯ ಸರ್ಕಾರದ ಮಾಹಿತಿ ತಂತ್ರಜ್ಞಾನ ಕಚೇರಿಯಲ್ಲಿ ಪೂರ್ಣಾವಧಿ ಸರ್ಕಾರಿ ನೌಕರನಾಗಿ ಸೇವೆ ಸಲ್ಲಿಸುತ್ತಿದ್ದಾಗಲೇ ಅವರು ಗ್ಲೋಬಲ್ ಫೌಂಡರೀಸ್ ಎಂಬ ಸೆಮಿಕಂಡಕ್ಟರ್ ಕಂಪನಿಯಲ್ಲಿಯೂ ಕಂಟ್ರಾಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರಿಂದ ನ್ಯೂಯಾರ್ಕ್ ಕಚೇರಿಯಲ್ಲಿ 50,000 ಡಾಲರ್ ಹಣ ದುರ್ಬಳಕೆಯಾಗಿತ್ತು ಎಂದು ಸ್ಥಳೀಯ ಪೊಲೀಸರಿಗೆ ಅನಾಮಧೇಯರಿಂದ ಒಂದು ಇ-ಮೇಲ್ ಬಂದಿತ್ತು.
ಆ ಇ-ಮೇಲ್ ಆಧಾರದಲ್ಲಿ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿದ್ದರು. ತನಿಖೆಯಲ್ಲಿ ಮೆಹುಲ್ ಅವರು ಎರಡು ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವುದು ಹಾಗೂ 50 ಸಾವಿರ ಡಾಲರ್ ಹಣ ದುರ್ಬಳಕೆಯಾಗಿರುವುದು ಖಚಿತವಾಗಿತ್ತು. ಆಗ, ಅವರು ಮೆಹುಲ್ ಅವರನ್ನು ಬಂಧಿಸಿದ್ದಾರೆ. ನ್ಯಾಯಾಲಯದಲ್ಲಿ ಅವರ ಕೇಸ್ ನ ವಿಚಾರಣೆ ನಡೆದು ಈಗ ತೀರ್ಪು ಬಂದಿದ್ದು ಅವರಿಗೆ 15 ವರ್ಷ ಜೈಲು ಶಿಕ್ಷೆಯಾಗಿದೆ.
ಅಮೆರಿಕದಲ್ಲಿ ಎರಡು ಕಡೆ ಕೆಲಸ ಮಾಡುವುದು ತಪ್ಪಾ?
ಅಮೆರಿಕದಲ್ಲಿ ಎರಡು ಕಂಪನಿಗಳಲ್ಲಿ ಕೆಲಸ ಮಾಡುವುದು ತಪ್ಪೇನಲ್ಲ. ಆದರೆ, ಅಲ್ಲಿನ ಸರ್ಕಾರಿ ನೌಕರರು ಬೇರೊಂದು ಕಂಪನಿಯಲ್ಲಿ ಪೂರ್ಣಕಾಲಿಕರಾಗಿ ಸೇವೆ ಸಲ್ಲಿಸುವುದು ಅಪರಾಧ. ಮೆಹುಲ್ ಅವರ ತಪ್ಪೇನೆಂದರೆ, ಅವರು ನ್ಯೂಯಾರ್ಕ್ ರಾಜ್ಯ ಸರ್ಕಾರದ ಐಟಿ ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿದ್ದರೂ, ಗ್ಲೋಬಲ್ ಫೌಂಡರೀಸ್ ಎಂಬ ಮತ್ತೊಂದು ಕಂಪನಿಯಲ್ಲಿಯೂ ಫುಲ್ ಟೈಂ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದರು. ನ್ಯೂಯಾರ್ಕ್ ನಲ್ಲಿರುವ ಸರ್ಕಾರಿ ಸಂಸ್ಥೆಯಲ್ಲಿ ಅವರಿಗೆ ರಿಮೋಟ್ ವರ್ಕಿಂಗ್ ಆಧಾರದಲ್ಲಿ ಕೆಲಸ ನೀಡಲಾಗಿತ್ತು. ಹಾಗಾಗಿ, ಅವರು ಕಚೇರಿಗೆ ಹೋಗಿ ಕೆಲಸ ಮಾಡುವ ಅವಕಾಶವಿರಲಿಲ್ಲ. ಅದನ್ನು ಬಳಸಿಕೊಂಡು ಅವರು ಗ್ಲೋಬರ್ ಫೌಂಡರೀಸ್ ಕಂಪನಿಯ ಕಚೇರಿಯಲ್ಲಿ ಕುಳಿತು ನ್ಯೂಯಾರ್ಕ್ ರಾಜ್ಯ ಸರ್ಕಾರದ ಸಾಫ್ಟ್ ವೇರ್ ಕಂಪನಿ ಹಾಗೂ ಗ್ಲೋಬಲ್ ಫೌಂಡರೀಸ್ ಕಂಪನಿಯ ಎರಡೂ ಕೆಲಸಗಳನ್ನು ನಿಭಾಯಿಸುತ್ತಿದ್ದರು. ಜೊತೆಗೆ, ನ್ಯೂಯಾರ್ಕ್ ರಾಜ್ಯ ಸರ್ಕಾರದ ಕಂಪನಿಯಲ್ಲಿ 50 ಸಾವಿರ ಡಾಲರ್ ಹಣ ಎಗರಿಸಿದ್ದ ಆರೋಪವೂ ಕೇಳಿಬಂದಿತ್ತು.