ಎಫ್-35 ಯುದ್ಧವಿಮಾನ ಖರೀದಿ ಕೈಬಿಟ್ಟ ಭಾರತ: ಸ್ವದೇಶಿ ಶಸ್ತ್ರಾಸ್ತ್ರ ತಯಾರಿಕೆಗೂ ಆದ್ಯತೆ

ನವದೆಹಲಿ: ಅಮೆರಿಕದ ಎಫ್-35 ಯುದ್ಧ ವಿಮಾನ ಖರೀದಿಸುವ ಆಲೋಚನೆಯನ್ನು ಭಾರತ ಕೈಬಿಟ್ಟಿದೆ. ಭಾರತದ ಮೇಲೆ ಅಮೆರಿಕ ಶೇ 25ರಷ್ಟು ಆಮದು ಸುಂಕ ಹೇರಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಸುಂಕ ಹೇರಿಕೆಗೆ ಇದು ಪ್ರತಿಕ್ರಮ ಅಲ್ಲ ಎನ್ನಲಾಗಿದೆ. ಭಾರತ ಇನ್ನೂ ಕೂಡ ಯಾವುದೇ ಪ್ರತಿಸುಂಕ ವಿಧಿಸುವ ಯೋಚನೆ ಮಾಡಿಲ್ಲ. ಅಮೆರಿಕದೊಂದಿಗೆ ಟ್ರೇಡ್ ಡೀಲ್ ಸಂಬಂಧ ಮಾತುಕತೆ ಇನ್ನೂ ಅಂತಿಮ ಹಂತಕ್ಕೆ ಬಂದಿಲ್ಲ. ವ್ಯಾಪಾರ ಒಪ್ಪಂದ ಅಂತಿಮಗೊಳ್ಳುವವರೆಗೂ ಶೇ. 25ರ ತೆರಿಗೆಯನ್ನು ಭಾರತ ಸಹಿಸಿಕೊಳ್ಳಬೇಕಾಗಬಹುದು.

ಅಮೆರಿಕದ ಎಫ್-35 ಯುದ್ಧವಿಮಾನ ಒಪ್ಪಂದ ಕೈಬಿಟ್ಟ ಭಾರತ
ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ ವೇಳೆ ಡೊನಾಲ್ಡ್ ಟ್ರಂಪ್ ಅವರು ಎಫ್-35 ಫೈಟರ್ ಜೆಟ್ ಅನ್ನು ಭಾರತಕ್ಕೆ ಆಫರ್ ಮಾಡಿದ್ದರು. ಇದೀಗ ಶಕ್ತಿಶಾಲಿ ಫೈಟರ್ ಜೆಟ್ ಎನಿಸಿದ ಎಫ್-35 ಅನ್ನು ಖರೀದಿಸುವ ಆಸಕ್ತಿ ಇಲ್ಲ ಎಂದು ಅಮೆರಿಕಕ್ಕೆ ಭಾರತ ತಿಳಿಸಿದೆ.
ಭಾರತ ಯಾಕೆ ಎಫ್-35 ಖರೀದಿಸುತ್ತಿಲ್ಲ?
ಭಾರತವು ಜಂಟಿಯಾಗಿ ಶಸ್ತ್ರಾಸ್ತ್ರಗಳನ್ನು ತಯಾರಿಸಲು ಆದ್ಯತೆ ನೀಡುತ್ತಿದೆ. ಎಫ್-35 ವಿಮಾನವನ್ನು ಅಮೆರಿಕದ ಲಾಕ್ಹೀಡ್ ಮಾರ್ಟಿನ್ ಸಂಸ್ಥೆ ತಯಾರಿಸುತ್ತದೆ. ಭಾರತೀಯ ಕಂಪನಿಯೊಂದಿಗೆ ಜಂಟಿಯಾಗಿ ಈ ಯುದ್ಧವಿಮಾನ ತಯಾರಿಸಲು ಅಮೆರಿಕ ಸಿದ್ಧ ಇಲ್ಲ. ಭಾರತ ತನ್ನ ಮಿಲಿಟರಿ ಉಪಕರಣಗಳ ವಿಚಾರದಲ್ಲಿ ಸ್ವಾವಲಂಬನೆ ಸಾಧಿಸುವ ಗುರಿ ಹೊಂದಿದೆ. ಈ ಕಾರಣಕ್ಕೆ ಎಫ್-35 ಯುದ್ಧವಿಮಾನ ಖರೀದಿ ಪ್ರಸ್ತಾಪದಿಂದ ಭಾರತ ಹಿಂದಕ್ಕೆ ಸರಿದಿರಬಹುದು
ಎಫ್-35 ಐದನೇ ತಲೆಮಾರಿನ ಯುದ್ಧವಿಮಾನವಾಗಿದೆ. ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ಸ್ಟೀಲ್ ಏರ್ಕ್ರಾಫ್ಟ್ ಎಂದೆನಿಸಿದೆ. ಚೀನಾ ಮತ್ತು ರಷ್ಯಾ ಬಳಿಯೂ ಐದನೇ ತಲೆಮಾರಿನ ಫೈಟರ್ ಜೆಟ್ಗಳಿವೆ. ಫ್ರಾನ್ಸ್ನ ರಫೇಲ್ ಜೆಟ್ ಐದನೇ ತಲೆಮಾರಿನ ಫೈಟರ್ ಜೆಟ್ ಅಲ್ಲ. ಭಾರತ ತಾನೇ ಸ್ವಂತವಾಗಿ ಈ ಫೈಟರ್ ಜೆಟ್ ತಯಾರಿಸುವ ಪ್ರಯತ್ನದಲ್ಲಿದೆ. ಅದಕ್ಕೆ ಎಎಂಸಿಎ ಪ್ರಾಜೆಕ್ಟ್ ಆರಂಭವಾಗಿದೆ.
