ಆರ್‌ಸಿ-ಡಿಎಲ್‌ಗಳಿಗಾಗಿ RTO ಕಚೇರಿಗಳಲ್ಲಿ ಅಕ್ರಮ

ಬೆಂಗಳೂರು:ಬೆಂಗಳೂರಿನ ವಿವಿಧ ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ (RTO) ಲೋಕಾಯುಕ್ತ ಅಧಿಕಾರಿಗಳು ನಡೆಸಿದ ದಿಢೀರ್ ಪರಿಶೀಲನೆಯಲ್ಲಿ ಡಿಎಲ್ (DL) ಮತ್ತು ಆರ್‌ಸಿ (RC) ವಿತರಣೆಯಲ್ಲಿನ ಭಾರೀ ವಿಳಂಬ ಮತ್ತು ಲೋಪದೋಷಗಳು ಬೆಳಕಿಗೆ ಬಂದಿವೆ.

ನ್ಯಾಯಮೂರ್ತಿ ವೀರಪ್ಪ ಅವರು ಕೆಆರ್ ಪುರಂ ಕಚೇರಿಗೆ ಭೇಟಿ ನೀಡಿದರೆ, ರಜನಿಕಾಂತ್ ಎಂಬುವವರಿಗೆ ಸೇರಿದ ಮಾರುತಿ ಮೋಟಾರ್ಸ್ ಪ್ರೈವೇಟ್ ಲಿಮಿಟೆಡ್ ಅಂಗಡಿಯಲ್ಲಿ ಪತ್ತೆಯಾದ ಆರ್‌ಸಿ ಮತ್ತು ಡಿಎಲ್‌ಗಳನ್ನು ಆರೋಪಿಗಳು ಆರ್ಟಿಒದ ಎರಡನೇ ಮಹಡಿಯ ಅಧಿಕಾರಿಯಿಂದ ಪಡೆದಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಅವರ ಪರಿಶೀಲನೆಯಲ್ಲಿ ಇಲ್ಲಿ 2,095 ಡಿಎಲ್‌ಗಳು ಮುದ್ರಣಕ್ಕೆ ಬಾಕಿ ಉಳಿದಿರುವುದು ಮತ್ತು 789 ಡಿಎಲ್‌ಗಳು ವಿತರಣೆಗೆ ಬಾಕಿ ಉಳಿದಿರುವುದು ಕಂಡುಬಂದಿದೆ.
ಇದೇ ರೀತಿ, ರಾಜಾಜಿನಗರ ಆರ್‌ಟಿಒನಲ್ಲಿ 3,800 ಡಿಎಲ್‌ಗಳು ಮತ್ತು 6,300 ಆರ್‌ಸಿ ಸ್ಮಾರ್ಟ್ ಕಾರ್ಡ್‌ಗಳು ಮುದ್ರಣಕ್ಕೆ ಬಾಕಿ ಉಳಿದಿರುವುದು ಪತ್ತೆಯಾಗಿದೆ.
ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಅವರು ಭೇಟಿ ನೀಡಿದಾಗ, 1,300 ಆರ್‌ಸಿ ಕಾರ್ಡ್‌ಗಳು ಅಂಚೆ ಮೂಲಕ ತಲುಪದೆ ವಾಪಸಾಗಿದ್ದು, ಅವುಗಳನ್ನು ಪುನಃ ತಲುಪಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ತಿಳಿದುಬಂದಿದೆ.
ಇದಲ್ಲದೆ, ಯಲಹಂಕ ಆರ್‌ಟಿಒದಲ್ಲಿ ತೆರಿಗೆ ಪಾವತಿಸದೆ ಚಲಿಸುತ್ತಿರುವ 1,200 ವಾಹನಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಅಂಶವೂ ಬಹಿರಂಗವಾಗಿದೆ.