ಅನೈತಿಕ ಸಂಬಂಧ ಪ್ರಶ್ನಿಸಿದ್ದಕ್ಕೆ ಪತ್ನಿಯನ್ನು ಕೊಂದು ಶವವನ್ನು ಕೊಳಕ್ಕೆ ಎಸೆದ ಪತಿ: ಕೇರಳದಲ್ಲಿ ಆಘಾತ

ಕೊಟ್ಟಾಯಂ: ತನ್ನ ವಿವಾಹೇತರ ಸಂಬಂಧವನ್ನು ಪ್ರಶ್ನಿಸಿದ ಕಾರಣಕ್ಕೆ ಪತ್ನಿಯನ್ನು ಕೊಂದು ಆಕೆಯ ಶವವನ್ನು ಕೊಳಕ್ಕೆ ಎಸೆದ ಆರೋಪದ ಮೇಲೆ ಕೇರಳದ (Kerala) 59 ವರ್ಷದ ವ್ಯಕ್ತಿಯೊಬ್ಬನನ್ನು ಇಂದು ಬಂಧಿಸಲಾಗಿದೆ. ಸೆಪ್ಟೆಂಬರ್ 26ರಂದು ಕೇರಳದ ಕುರವಿಲಂಗಡ ಬಳಿ ಈ ಘಟನೆ ನಡೆದಿದೆ. ಸ್ಯಾಮ್ ಜಾರ್ಜ್ ಸಂಜೆ 6 ಗಂಟೆ ಸುಮಾರಿಗೆ ಮನೆಗೆ ನುಗ್ಗಿ, ಪತ್ನಿಯ ಕತ್ತು ಹಿಸುಕಿ ಕೊಂದು, ಆಕೆಯ ಶವವನ್ನು ಕಾರಿನ ಬೂಟಿನಲ್ಲಿ ಇರಿಸಿಕೊಂಡು, ನಂತರ ಇಡುಕ್ಕಿ ಜಿಲ್ಲೆಯ ಉಡುಂಬನ್ನೂರ್ ಬಳಿಯ ಕೊಳದಲ್ಲಿ ಎಸೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಜಾರ್ಜ್ ಕಳೆದ 15 ವರ್ಷಗಳಿಂದ ತನ್ನ ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದನು. ಎರಡು ಅಂತಸ್ತಿನ ಮನೆಯಲ್ಲಿ ಮೇಲೆ ಆತ ವಾಸವಾಗಿದ್ದರೆ ಕೆಳಗಿನ ಮಹಡಿಯಲ್ಲಿ ಆತನ ಹೆಂಡತಿ ವಾಸವಾಗಿದ್ದಳು. ಆತ ಒಬ್ಬಂಟಿಯಾಗಿ ವಾಸಿಸುತ್ತಿದ್ದು, ಅವನ ಪತ್ನಿ ಜೆಸ್ಸಿ (49) ತಮ್ಮ ಮೂವರು ಮಕ್ಕಳೊಂದಿಗೆ ಇದ್ದರು. ಮಕ್ಕಳು ವಿದೇಶಕ್ಕೆ ತೆರಳಿದ ನಂತರ, ಜೆಸ್ಸಿ ಕಳೆದ 6 ತಿಂಗಳಿನಿಂದ ಒಂಟಿಯಾಗಿ ವಾಸಿಸುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಜಾರ್ಜ್ ಕೂಡ ಕೆಲಸಕ್ಕಾಗಿ ವಿದೇಶದಲ್ಲಿಯೇ ಇದ್ದು, ಕಳೆದ 6 ತಿಂಗಳಿನಿಂದ ಎಂಜಿ ವಿಶ್ವವಿದ್ಯಾಲಯದಲ್ಲಿ ಪ್ರವಾಸೋದ್ಯಮದಲ್ಲಿ ಸ್ನಾತಕೋತ್ತರ ಕೋರ್ಸ್ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ವಿದೇಶದಲ್ಲಿದ್ದ ಮಕ್ಕಳು ಎಷ್ಟೇ ಫೋನ್ ಮಾಡಿದರೂ ಸೆಪ್ಟೆಂಬರ್ 26ರಿಂದ ತಮ್ಮ ತಾಯಿಯನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ. ಈ ಕಾರಣದಿಂದ ಅವರ ಸಂಬಂಧಿಕರಿಗೆ ಮಾಹಿತಿ ನೀಡಿದ್ದರು. ಅವರು ಪೊಲೀಸರೊಂದಿಗೆ ಅವರ ಮನೆಯನ್ನು ಹುಡುಕಿದರು. ಆದರೆ ಏನೂ ಸಿಕ್ಕಿರಲಿಲ್ಲ.
ಆರಂಭದಲ್ಲಿ, ನಾಪತ್ತೆ ಪ್ರಕರಣ ದಾಖಲಾಗಿತ್ತು. ತನಿಖೆಯ ಸಮಯದಲ್ಲಿ ಪೊಲೀಸರು ಜಾರ್ಜ್‌ನನ್ನು ಪ್ರಶ್ನಿಸಿದರು. ಆಗ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡ ಆತನನ್ನು ಬಂಧಿಸಲಾಯಿತು.