ಪತ್ನಿಯನ್ನು ಕೊಚ್ಚಿ ಕೊಂದ ಪತಿ; ಮಗುವಿನೊಂದಿಗೆ ಬಾವಿಗೆ ಜಿಗಿದು ಆತ್ಮಹ*ತ್ಯೆ; ಮಗು ಪ್ರಾಣಾಪಾಯದಿಂದ ಪಾರು

ಕಲಬುರಗಿ : ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಲಕ್ಷ್ಮೀಪುತ್ರ ಎಂಬ ವ್ಯಕ್ತಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಹತ್ಯೆ ಮಾಡಿ, ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಆದರೆ ಮಗುವನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಲಕ್ಷ್ಮೀಪುತ್ರ ತನ್ನ 23 ವರ್ಷದ ಪತ್ನಿ ಅಂಜಲಿಯನ್ನು ಮನೆಯಲ್ಲೇ ಕುಡುಗೋಲಿನಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾನೆ. ಪತ್ನಿಯ ಹತ್ಯೆಯ ಬಳಿಕ ತೀವ್ರ ಹತಾಶೆಗೊಂಡ ಆತ ತನ್ನ ಪುಟ್ಟ ಮಗುವನ್ನು ಎತ್ತಿಕೊಂಡು ಗ್ರಾಮದ ಹೊರವಲಯದ ಬಾವಿಗೆ ಜಿಗಿದಿದ್ದಾನೆ.
ಲಕ್ಷ್ಮೀಪುತ್ರ ಮಗುವಿನೊಂದಿಗೆ ಬಾವಿಗೆ ಜಿಗಿಯುವುದನ್ನು ಕಂಡ ಸ್ಥಳೀಯರು ಕೂಡಲೇ ಸ್ಥಳಕ್ಕೆ ಧಾವಿಸಿದ್ದಾರೆ. ತಡಮಾಡದೆ ಬಾವಿಗೆ ಜಿಗಿದ ಗ್ರಾಮಸ್ಥರು ಮಗುವನ್ನು ಸುರಕ್ಷಿತವಾಗಿ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಲಕ್ಷ್ಮೀಪುತ್ರ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ವಿಷಯ ತಿಳಿದ ರೇವೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪತ್ನಿಯ ಕೊಲೆ ಮತ್ತು ಪತಿಯ ಆತ್ಮಹತ್ಯೆಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.