ರೀಲ್ಸ್ ಕ್ರೇಜ್ಗೆ ಬಲಿಯಾದ ಪತಿ: ಯೂಟ್ಯೂಬ್ ನೋಡಿ ಗಂಡನನ್ನೇ ಮುಗಿಸಿದ ‘ಕಿಲ್ಲಿಂಗ್’ ಹೆಂಡತಿ!

ಮನರಂಜನೆ ಎನ್ನುವ ಹೆಸರಿನಲ್ಲಿ ಆರಂಭವಾದ ರೀಲ್ಸ್ ಕ್ರೇಜ್ ಒಂದು ಕುಟುಂಬವನ್ನೇ ನಾಶಪಡಿಸಿದ ಘಟನೆ ಮಧ್ಯಪ್ರದೇಶದ ಝಬುವಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ರೀಲ್ಸ್ ಮಾಡಲು ಪತಿ ವಿರೋಧ ವ್ಯಕ್ತಪಡಿಸಿದ್ದಕ್ಕೆ ಕೋಪಗೊಂಡ ಪತ್ನಿಯೇ ಆತನನ್ನು ಕತ್ತು ಹಿಸುಕಿ ಕೊಂದಿರುವುದು ಇದೀಗ ಬಹಿರಂಗವಾಗಿದೆ. ಜಿಲ್ಲೆಯ ಥಾಂಡ್ಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ ಗುರುವಾರ 25 ವರ್ಷದ ಕೈಲಾಶ್ ಎಂಬ ಯುವಕನ ಶವ ಪತ್ತೆಯಾಗಿದೆ. ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಾಣಿಸದಿದ್ದರೂ, ಅನುಮಾನಾಸ್ಪದ ಸ್ಥಿತಿಯಲ್ಲಿ ಶವ ಕಂಡುಬಂದಿತ್ತು. ಶವದ ಬಳಿ ಪತ್ನಿ ಅಳುತ್ತಾ ಕುಳಿತಿದ್ದ ದೃಶ್ಯ ಮೊದಲಿಗೆ ಎಲ್ಲರನ್ನು ಮರುಳುಗೊಳಿಸಿತ್ತು.

ಪತಿ-ಪತ್ನಿ ನಡುವೆ ಜಗಳ
ತಡರಾತ್ರಿ ಪತಿ-ಪತ್ನಿ ನಡುವೆ ಭಾರೀ ಜಗಳ ನಡೆದಿತ್ತು ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪತ್ನಿಯೇ ಕೈಲಾಶ್ನನ್ನು ಕೊಂದಿದ್ದಾಳೆ ಎಂಬ ಶಂಕೆಯ ಮೇಲೆ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಪೊಲೀಸರು ತನಿಖೆ ಆರಂಭಿಸಿದರು.
ತನಿಖೆಯಲ್ಲಿ ಬಯಲಾದ ಭಯಾನಕ ಸತ್ಯ
ಪ್ರಾಥಮಿಕ ತನಿಖೆಯಲ್ಲಿ ಪ್ರಕರಣ ಸಹಜ ಸಾವು ಎನ್ನುವಂತೆ ಕಂಡರೂ, ವಿಚಾರಣೆ ವೇಳೆ ಭಯಾನಕ ಸತ್ಯ ಹೊರಬಂದಿದೆ. ಘಟನೆಗೆ ಒಂದು ದಿನ ಮೊದಲು, ಮದುವೆ ಸಮಾರಂಭದಲ್ಲಿ ನೃತ್ಯ ಮಾಡುವ ದೃಶ್ಯವನ್ನು ರೀಲ್ಸ್ಗಾಗಿ ಚಿತ್ರೀಕರಿಸಿ ಸಾಮಾಜಿಕ ಮಾಧ್ಯಮದಲ್ಲಿ ಅಪ್ಲೋಡ್ ಮಾಡಲು ಪತ್ನಿ ಬಯಸಿದ್ದರು. ಇದಕ್ಕೆ ಕೈಲಾಶ್ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ಯೂಟ್ಯೂಬ್ನಲ್ಲಿ ಕೊಲೆಯ ವಿಧಾನ ಹುಡುಕಾಟ
ಈ ವಿಚಾರವಾಗಿ ಉಂಟಾದ ಜಗಳ ತೀವ್ರ ಸ್ವರೂಪ ಪಡೆದುಕೊಂಡಿದೆ. ಕೋಪಗೊಂಡ ಪತ್ನಿ ಯೂಟ್ಯೂಬ್ನಲ್ಲಿ ಕೊಲೆಯ ವಿಧಾನಗಳನ್ನು ಹುಡುಕಿದ್ದು, ಅದೇ ರಾತ್ರಿ ಪೇಟದಿಂದ ಕೈಲಾಶ್ನ ಕತ್ತು ಹಿಸುಕಿ ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ತೀವ್ರ ವಿಚಾರಣೆಯ ವೇಳೆ ಆರೋಪಿ ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿತ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಮುಂದಿನ ತನಿಖೆ ಮುಂದುವರೆದಿದೆ. ರೀಲ್ಸ್, ಲೈಕ್ಸ್ ಮತ್ತು ಸಾಮಾಜಿಕ ಮಾಧ್ಯಮದ ಅತಿರೇಕ ಯಾವ ಮಟ್ಟಕ್ಕೆ ಹೋಗಬಹುದು ಎಂಬುದಕ್ಕೆ ಈ ಘಟನೆ ಭಯಾನಕ ಉದಾಹರಣೆಯಾಗಿದೆ.