ಮಧ್ಯಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಕಾರಿನ ಟೈರ್ ಸಿಡಿದು ಬಾವಿಗೆ ಬಿದ್ದ ಕಾರು, ಮೂವರು ಸಾಧುಗಳ ಸಾವು

ಮಧ್ಯಪ್ರದೇಶ : ಕಾರಿನ ಚಕ್ರ ಸಿಡಿದು ನಿಯಂತ್ರಣ ಕಳೆದುಕೊಂಡ ಕಾರೊಂದು ಹೆದ್ದಾರಿ ಬಳಿಯ ಬಾವಿಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಮೂವರು ಸಾಧುಗಳು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಧ್ಯಪ್ರದೇಶದ ಛಿಂದ್ವಾರದಲ್ಲಿ ಶುಕ್ರವಾರ ( ಸೆ . 19 ) ಸಂಭವಿಸಿದೆ .

ಘಟನೆ ಕುರಿತು ಮಾಹಿತಿ ನೀಡಿದ ಅಧಿಕಾರಿ ಮುಖೇಶ್ ದ್ವಿವೇದಿ , ಕಾರಿನಲ್ಲಿ ಒಟ್ಟು ಏಳು ಮಂದಿ ಸಾಧುಗಳು ಚಿತ್ರಕೂಟದಿಂದ ಬೇತುಲ್ ಕಡೆಗೆ ಪ್ರಯಾಣ ಮಾಡುತ್ತಿದ್ದರು ಈ ವೇಳೆ ಕಾರು ಛಿಂದ್ವಾರದ ಬೇತುಲ್ ರಸ್ತೆಯಲ್ಲಿ ಬರುತ್ತಿದ್ದಂತೆ ಕಾರಿನ ಟಯರ್ ಸ್ಫೋಟಗೊಂಡಿದೆ ಪರಿಣಾಮ ನಿಯಂತ್ರಣ ಕಳೆದು ರಸ್ತೆ ಬದಿಯ ಮರಕ್ಕೆ ಢಿಕ್ಕಿ ಹೊಡೆದು ಅಲ್ಲೇ ಪಕ್ಕದಲ್ಲಿದ್ದ ತಡೆಗೋಡೆ ಇಲ್ಲದ ಬಾವಿಗೆ ಬಿದ್ದಿದೆ , ಘಟನೆಯಲ್ಲಿ ಮೂವರು ಸಾಧುಗಳು ಮೃತಪಟ್ಟಿದ್ದು , ಮೂವರನ್ನು ರಕ್ಷಣೆ ಮಾಡಲಾಗಿದ್ದು ಓರ್ವ ಸಾಧು ನಾಪತ್ತೆಯಾಗಿದ್ದು ಅವರ ಪತ್ತೆಗೆ ಹುಡುಕಾಟ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ .
ಗಾಯಗೊಂಡವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ .
