ಬೀದರ್ ಬ್ರಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಭೀಕರ ಹ*ಲ್ಲೆ; ಕ್ಯಾಜುವಾಲಿಟಿ ವಾರ್ಡ್‌ನಲ್ಲೇ ಗೂಂಡಾಗಿರಿ!

ಬೀದರ್: ತಡರಾತ್ರಿ ಕರ್ತವ್ಯದಲ್ಲಿದ್ದ ಬ್ರಿಮ್ಸ್ ಆಸ್ಪತ್ರೆಯ ವೈದ್ಯರ ಮೇಲೆ ರೋಗಿಯ ಸಂಬಂಧಿಕರು ಹಲ್ಲೆ ನಡೆಸಿದ ಘಟನೆ ಬೀದರ್ ನಗರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಆಸ್ಪತ್ರೆಯ ಕ್ಯಾಜುವಾಲಿಟಿ ವಾರ್ಡ್‌ನಲ್ಲೇ ನಡೆದ ಈ ಘಟನೆ ವೈದ್ಯಕೀಯ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಮಾಹಿತಿಯ ಪ್ರಕಾರ, ರಾತ್ರಿ ಸುಮಾರು ೧ ಗಂಟೆ ವೇಳೆಗೆ ಇನ್ನೋವಾ ಕಾರಿನಲ್ಲಿ ಬಂದಿದ್ದ ಕೆಲವರು ಕುಡಿದ ಅಮಲಿನಲ್ಲಿ ಕ್ಯಾಜುವಾಲಿಟಿ ವಾರ್ಡ್‌ಗೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಬಳಿಕ ಕರ್ತವ್ಯದಲ್ಲಿದ್ದ ವೈದ್ಯ ಡಾ. ತುಕರಾಮ ಮಚ್ಚಂದ್ರ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ.
ಹಲ್ಲೆಯಿಂದ ಡಾ. ತುಕರಾಮ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಆಸ್ಪತ್ರೆಯೊಳಗೆ ಭಯಭೀತ ವಾತಾವರಣ ನಿರ್ಮಾಣವಾಗಿದ್ದು, ಸಿಬ್ಬಂದಿ ಕೆಲಕಾಲ ಆತಂಕಗೊಂಡಿದ್ದರು.
ಈ ಸಂಬಂಧ ಆದಿತ್ಯ, ವಿನೋದ ಚಾಂಚೋಳ, ಗೋವಿಂದ ಬೆನಕನಳ್ಳಿ, ಅನಿಲ ಬೆನಕನಳ್ಳಿ, ಮಹಾದೇವ ಬೆನಕನಳ್ಳಿ, ಬಾಲಾಜಿ ತಾಜಲಾಪೂರ, ಪವನ ಚಾಂಬೋಳ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾಗಿದೆ.
ಘಟನೆ ಕುರಿತು ಬೀದರ್ ನಗರದ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
