ಮೆರೈನ್ ಡ್ರೈವ್‌ನಲ್ಲಿ ಭೀಕರ ಅಪಘಾತ: ಬೈಕ್ ಸವಾರ ಸೇರಿದಂತೆ ಮೂವರ ಸಾ*ವು; ಜನ್ಮದಿನದ ಮರುದಿನವೇ ಯುವಕನ ಅಂತ್ಯ

ಮುಂಬೈ: ತನ್ನ ಹುಟ್ಟುಹಬ್ಬದ ಮರುದಿನ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 19 ವರ್ಷದ ಯುವಕ, ಹಿಂಬದಿ ಸವಾರೆ 18 ವರ್ಷದ ಯುವತಿ ಹಾಗೂ 66 ವರ್ಷದ ವೃದ್ಧ ಪಾದಚಾರಿ ಸೇರಿ ಮೂವರು ಸಾವನ್ನಪ್ಪಿದ ಘಟನೆ ಸೋಮವಾರ ಮುಂಜಾನೆ ಮೆರೈನ್ ಡ್ರೈವ್ ನಲ್ಲಿ ನಡೆದಿದೆ.
ವೇಗವಾಗಿ ಬೈಕ್ ಚಲಾಯಿಸುತ್ತಿದ್ದ ಯುವಕ ರಸ್ತೆ ದಾಟುತ್ತಿದ್ದ ವೃದ್ಧರೋರ್ವರಿಗೆ ಢಿಕ್ಕಿ ಹೊಡೆದ ಪರಿಣಾಮ ದುರಂತ ಸಂಭವಿಸಿದೆ. ಅಪಘಾತದ ರಭಸಕ್ಕೆ ಮೂವರು ಗಂಭೀರವಾಗಿ ಗಾಯಗೊಂಡು ಉರುಳಿ ಬಿದ್ದಿದ್ದಾರೆ. ಘಟನಾ ಸ್ಥಳದಿಂದ 100 ಅಡಿಗೂ ಹೆಚ್ಚು ದೂರದಲ್ಲಿ ವೃದ್ಧರ ಮೃತದೇಹ ಪತ್ತೆಯಾಗಿದೆ. ಹಿಂಬದಿ ಸವಾರೆ ಯುವತಿ ಸುಮಾರು 30 ಅಡಿ ದೂರದಲ್ಲಿದ್ದ ಕಾರಿನ ಕೆಳಗೆ ಬಿದ್ದಿದ್ದು, ಸವಾರನ ಮೃತದೇಹ ನಿಂತಿದ್ದ ದ್ವಿಚಕ್ರ ವಾಹನದ ಬಳಿಯೇ ಪತ್ತೆಯಾಗಿದೆ.

ಬೈಕ್ ಸವಾರನನ್ನು ಮುಲುಂಡ್ ನಿವಾಸಿ ಕೃಷ್ಣ ದೇಸಾಯಿ (19) ಎಂದು ಗುರುತಿಸಲಾಗಿದೆ. ಹಿಂಬದಿ ಸವಾರೆಯನ್ನು ಕಫೆ ಪರೇಡ್‌ನ ಗೀತಾ ನಗರ ನಿವಾಸಿ ಮುಸ್ಕಾನ್ ಶೇಖ್ (18) ಎಂದು ಗುರುತಿಸಲಾಗಿದೆ. ರಸ್ತೆ ದಾಟುತ್ತಿದ್ದ ಪಾದಚಾರಿಯನ್ನು ಗಿರ್ಗಾಂವ್ ನಿವಾಸಿ ಕಿಶೋರ್ ಲಮಾನೆ (66) ಎಂದು ಗುರುತಿಸಲಾಗಿದೆ.
ಬೈಕ್ ಎನ್‌ಎಸ್ ರಸ್ತೆಯ ಉತ್ತರ ದಿಕ್ಕಿನ ಲೇನ್ ಕಡೆಗೆ ಸಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರ ಸಹಾಯದಿಂದ ಮೂವರನ್ನೂ ಜಿಟಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅವರು ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಫೋರ್ಟ್ ಪ್ರದೇಶದ ಖಾಸಗಿ ಕಂಪನಿಯಿಂದ ನಿವೃತ್ತ ಅಕೌಂಟೆಂಟ್ ಲಮಾನೆ ಸೋಮವಾರ ಬೆಳಿಗ್ಗೆ ಎಂದಿನಂತೆ ವಾಕಿಂಗ್‌ಗೆ ಮನೆಯಿಂದ ಹೊರಟಿದ್ದರು. ಅವರು ತಮ್ಮ ಪತ್ನಿಯೊಂದಿಗೆ ಗಿರ್ಗಾಂವ್‌ನಲ್ಲಿ ವಾಸಿಸುತ್ತಿದ್ದರು ಮತ್ತು ಅವರ ಮಗ ಮೀರಾ ರಸ್ತೆಯಲ್ಲಿ ವಾಸಿಸುತ್ತಿದ್ದಾನೆ.
ಶಿಪ್ಪಿಂಗ್ ಮತ್ತು ಲಾಜಿಸ್ಟಿಕ್ಸ್ ವ್ಯವಹಾರದಲ್ಲಿ ತೊಡಗಿರುವ ಕೃಷ್ಣ ಅವರ ತಂದೆ ಉದಯ್ ದೇಸಾಯಿ, ಘಟನೆ ಸಮಯದಲ್ಲಿ ಮನೆಯಲ್ಲಿಯೇ ಇದ್ದರು. ಮುಲುಂಡ್ ಪೊಲೀಸ್ ಸಿಬ್ಬಂದಿ ಮನೆಗೆ ಬಂದು ಅಪಘಾತದ ಬಗ್ಗೆ ತಿಳಿಸಿದ ಬಳಿಕ ಅವರಿಗೆ ವಿಷಯ ತಿಳಿದುಬಂದಿದೆ. ಬಳಿಕ ಮೆರೈನ್ ಡ್ರೈವ್ ಪೊಲೀಸ್ ಅಧಿಕಾರಿಯ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ.
“ರವಿವಾರ ನನ್ನ ಮಗನ ಹುಟ್ಟುಹಬ್ಬವಾಗಿತ್ತು. ಸಂಜೆ ಮನೆಬಿಟ್ಟು ಹೊರಟಿದ್ದನು. ರಾತ್ರಿ 11.30ಕ್ಕೆ ವಾಟ್ಸಾಪ್ ವೀಡಿಯೊ ಕರೆ ಮಾಡಿ ಎಲ್ಲಿದ್ದೀಯೆಂದು ಕೇಳಿದಾಗ, ಮುಲುಂಡ್ ನಲ್ಲಿದ್ದೇನೆ ಮತ್ತು ಬೈಕ್‌ಗೆ ಇಂಧನ ತುಂಬಿಸುತ್ತಿದ್ದೇನೆ ಎಂದು ಹೇಳಿದ್ದನು. ಆದ್ದರಿಂದ ನಾನು Gpay ಮೂಲಕ ಪೆಟ್ರೋಲ್ ಗಾಗಿ 200 ರೂ.ಗಳನ್ನು ಕಳುಹಿಸಿದೆ. ನಾನು ಮತ್ತು ನನ್ನ ಉದ್ಯಮದ ಸಹೋದ್ಯೋಗಿ ಬೆಳಿಗ್ಗೆ ಅಂಧೇರಿಗೆ ಹೊರಡಬೇಕಾಗಿರುವುದರಿಂದ ಅವರನ್ನು ಬೇಗ ಮನೆಗೆ ಬರಲು ಹೇಳಿದ್ದೆ” ಎಂದು ಉದಯ್ ದೇಸಾಯಿ ಹೇಳಿದರು.
ಕೃಷ್ಣ 10ನೇ ತರಗತಿ ಪಾಸಾಗಿದ್ದನು. ಎಪ್ರಿಲ್ 5ರಂದು ಮಗನಿಗೆ ಬೈಕ್ ಖರೀದಿಸಿದ್ದಾಗಿ ಅವರು ಹೇಳಿದರು. “ಅಪಘಾತ ಹೇಗೆ ಸಂಭವಿಸಿತು ಎಂಬುದು ನಮಗೆ ತಿಳಿದಿಲ್ಲ. ಕೃಷ್ಣನಿಗೆ ಯೂಟ್ಯೂಬ್ ಮತ್ತು ಬ್ಲಾಗ್ ಗಳಲ್ಲಿ ಆಸಕ್ತಿ ಇತ್ತು. ಅವನು ನನಗೆ ತಿಳಿಸದೆ ಮೆರೈನ್ ಡ್ರೈವ್‌ಗೆ ಹೋಗಿದ್ದನು. ನನ್ನ ಮಗನಿಗೆ ಬೈಕ್ ನಿಲ್ಲಿಸಲು ಸ್ಥಳಾವಕಾಶ ಮಾಡಿಕೊಡುವಂತೆ ನಾನು ನನ್ನ ನೆರೆಹೊರೆಯವರಿಗೆ ಹೇಳಿದ್ದೆ” ಎಂದು ಉದಯ್ ಹೇಳಿದರು. “ಅವನಿಗೆ ಚಾಲನಾ ಪರವಾನಗಿ ಇತ್ತು” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಸ್ಕಾನ್ ಶೇಖ್ ಅವರ ತಂದೆ ಇಮಾಮ್ ಅಲಿ ವೃತ್ತಿಯಿಂದ ಟ್ಯಾಕ್ಸಿ ಚಾಲಕರಾಗಿದ್ದಾರೆ. ಅವರ ಸ್ನೇಹಿತರು ಮತ್ತು ಕೆಲವು ಸಂಬಂಧಿಕರು ದುರಂತದ ಬಗ್ಗೆ ತಿಳಿದು ಜಿಟಿ ಆಸ್ಪತ್ರೆಗೆ ಬಂದರು. “ಮುಸ್ಕಾನ್ ಕುಟುಂಬದಲ್ಲಿ ಹಿರಿಯ ಮಗಳು. ಆಕೆಗೆ ಕಿರಿಯ ಸಹೋದರ ಹಾಗೂ ಸಹೋದರಿ ಇದ್ದಾರೆ. ಆಕೆ ಇತ್ತೀಚೆಗಷ್ಟೇ 10ನೇ ತರಗತಿ ಪಾಸಾಗಿದ್ದಳು. ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದಳು,” ಎಂದು ಸಂಬಂಧಿಯೊಬ್ಬರು ಹೇಳಿದರು.
ಮುಸ್ಕಾನ್ ಶೇಖ್ ಅವರ ಚಿಕ್ಕಮ್ಮ ಮುಸ್ಕಾನ್ ಖಾನ್ ಗೀತಾ ನಗರದಲ್ಲೇ ವಾಸಿಸುತ್ತಿದ್ದಾರೆ. “ಬೆಳಿಗ್ಗೆ ಸುಮಾರು 4.30ಕ್ಕೆ ಮುಸ್ಕಾನ್ ನನ್ನ ಮನೆಗೆ ಬಂದು, ನನ್ನ ಮಗಳನ್ನು ತನ್ನ ಜೊತೆ ಬರುವಂತೆ ಹೇಳಿದರು. ಆದರೆ ನನ್ನ ಮಗಳು ನಿರಾಕರಿಸಿದ್ದರಿಂದ ಮುಸ್ಕಾನ್ ಒಬ್ಬಳೇ ಹೊರಟಳು. ನಂತರ ನಾನು ಅವಳಿಗೆ ಕರೆ ಮಾಡಿದಾಗಲೂ, ಅವಳು ಆಗಲೇ ಹೋಗಿದ್ದಳು. ನಾನು ಅವಳ ಜೊತೆ ಹೋಗಿದ್ದರೆ ಈ ಘಟನೆ ಸಂಭವಿಸದೇ ಇರಬಹುದಿತ್ತು” ಎಂದು ಅವರು ದುಃಖದಿಂದ ಹೇಳಿದರು.
ಮುಸ್ಕಾನ್ ಬೆಳಿಗ್ಗೆ 11 ಗಂಟೆಯವರೆಗೆ ಮನೆಗೆ ಹಿಂತಿರುಗದಿದ್ದರಿಂದ, ತಂದೆ ಇಮಾಮ್ ಅಲಿ ಹುಡುಕಾಟ ಆರಂಭಿಸಿದರು. ಆಕೆಯ ಫೋನ್ ಸ್ವಿಚ್ ಆಫ್ ಆಗಿತ್ತು. ಅವರ ಸ್ನೇಹಿತರೊಬ್ಬರು ಮೆರೈನ್ ಡ್ರೈವ್ ಪೊಲೀಸ್ ಠಾಣೆಗೆ ಹೋದಾಗ, ಅಪಘಾತದ ಬಗ್ಗೆ ಮಾಹಿತಿ ದೊರಕಿತು.
ಪೊಲೀಸರು ಘಟನಾ ಸ್ಥಳದಿಂದ ಮುಸ್ಕಾನ್ ಶೇಖ್ ಅವರ ಹಾನಿಗೊಳಗಾದ ಮೊಬೈಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಆಕೆ ಬಳಸಿದ್ದ ಸ್ಕೂಟರ್ ಅನ್ನು ಕುಟುಂಬಕ್ಕೆ ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಮೆರೈನ್ ಡ್ರೈವ್ ಪೊಲೀಸರು ಬೈಕ್ ಸವಾರ ಕೃಷ್ಣ ದೇಸಾಯಿ ವಿರುದ್ಧ ನಿರ್ಲಕ್ಷ್ಯ ಹಾಗೂ ದುಡುಕಿನ ಚಾಲನೆ, ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಚಾಲನೆ ಸೇರಿದಂತೆ ಬಿಎನ್ಎಸ್ ಕಾಯ್ದೆ ಮತ್ತು ಮೋಟಾರು ವಾಹನ ಕಾಯ್ದೆಯಡಿ ಪ್ರಕರಣ ದಾಖಲಿಸುವ ಪ್ರಕ್ರಿಯೆಯಲ್ಲಿದ್ದಾರೆ.
“ಸಂಬಂಧಪಟ್ಟವರ ಹೇಳಿಕೆಗಳನ್ನು ದಾಖಲಿಸಲಾಗುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು ಪ್ರಯತ್ನಿಸುತ್ತಿದ್ದೇವೆ. ಬೈಕ್‌ನಲ್ಲಿ ಇಬ್ಬರೂ ಎಲ್ಲಿಗೆ ತೆರಳುತ್ತಿದ್ದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.