ಠಾಣೆಯಲ್ಲೇ ಹೈಡ್ರಾಮಾ: ಕೀ ನುಂಗಿದ ಆರೋಪಿಯ ಪ್ರಾಣ ಉಳಿಸಲು ಬಾಳೆಹಣ್ಣಿನ ‘ಚಿಕಿತ್ಸೆ

ಬೆಂಗಳೂರು: ಪೋಕ್ಷೆ ಪ್ರಕರಣದ ಆರೋಪಿಯೊಬ್ಬ ಪೊಲೀಸ್ ಠಾಣೆಯಲ್ಲೇ ಬೀಗದ ಕೀ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದು, 10 ಕೆ.ಜಿ. ಬಾಳೆಹಣ್ಣನ್ನೂ ತಿನ್ನಿಸಿ, ಕೊನೆಗೂ ಕೀ ಹೊರತೆಗೆದ ಘಟನೆ ಇಲ್ಲಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ನಡೆದಿದೆ.
ಬಳ್ಳಾರಿಯ ಕಾರ್ತಿಕ್ ಯಾನೆ ರಾಮು(24) ಆತ್ಮಹತ್ಯೆಗೆ ಯತ್ನಿಸಿದವ ಆರೋಪಿ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ: ‘ಕಾರ್ತಿಕ್ ನಮ್ಮ ಬಾಲಕಿಯನ್ನು ಕರೆದುಕೊಂಡು ಹೋಗಿದ್ದಾನೆಂದು ಆಕೆಯ ಮನೆಯವರು ಎ.24ರಂದು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ನಾಪತ್ತೆ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ಕೈಗೊಂಡ ಪೊಲೀಸರು, ಕಾರ್ತಿಕ್ ಬಾಲಕಿಯನ್ನು ಕರೆದೊಯ್ದ ಬಗ್ಗೆ ಮಾಹಿತಿ ಸಂಗ್ರಹಿಸಿ ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ನಂತರ ಪೋಕ್ಷ ಪ್ರಕರಣ ದಾಖಲಿಸಿ ವಿಚಾರಣೆ ಕೈಗೊಂಡಿದ್ದರು.

ಠಾಣೆಯಲ್ಲಿದ್ದಾಗಲೇ ಆರೋಪಿ ಕೀ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಆದರಿಂದ ಗಾಬರಿಗೊಂಡ ಪೊಲೀಸರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸತತ ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಅಲ್ಲದೆ, ಆ ಮೂರು ದಿನ 10 ಕೆ.ಜಿ. ಬಾಳೆಹಣ್ಣು ತಿನ್ನಿಸಿದ್ದಾರೆ. ಬಳಿಕ ಶೌಚಕ್ಕೆ ಹೋದಾಗ ಕೀ ಹೊರಬಂದಿದೆ.
ನಂತರ ಆರೋಪಿಯನ್ನು ಹೆಚ್ಚಿನ ವಿಚಾರಣೆಗೆ ಗುರಿಪಡಿಸಿ ಫೋಕ್ಷೆ ಪ್ರಕರಣದೊಂದಿಗೆ ಪೊಲೀಸರಿಗೆ ಆತಂಕ ಸೃಷ್ಟಿಸಿದ ಆರೋಪದಲ್ಲಿ ಇತರೆ ಸೆಕ್ಷನ್ಗಳನ್ನು ವಿಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.