ಪಹಲ್ಗಾಮ್ ದಾಳಿ ಪಾಕ್‌ನಿಂದ ಎನ್ನುವುದಕ್ಕೆ ಪುರಾವೆ ಎಲ್ಲಿದೆ?: ಚಿದಂಬರಂ ವಿವಾದಾತ್ಮಕ ಪ್ರಶ್ನೆ

ನವದೆಹಲಿ: ಪಹಲ್ಗಾಮ್ ದಾಳಿ ನಡೆಸಿರುವ ಉಗ್ರರು ಪಾಕಿಸ್ತಾನದಿಂದಲೇ ಬಂದಿದ್ದಾರೆ ಎಂಬುದಕ್ಕೆ ಪುರಾವೆ ಏನಿದೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಗೃಹ ಸಚಿವ ಪಿ ಚಿದಂಬರಂ ಪ್ರಶ್ನೆ ಮಾಡಿದ್ದಾರೆ. ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್ ಕುರಿತ ಚರ್ಚೆಗೂ ಮುನ್ನ ಅವರು ನೀಡಿರುವ ಹೇಳಿಕೆ ರಾಜಕೀಯ ಬಿರುಗಾಳಿಯನ್ನು ಸೃಷ್ಟಿಸಿದೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಪಹಲ್ಗಾಮ್ ದಾಳಿ ಕುರಿತು ಕೆಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರು ನಿಜವಾಗಿಯೂ ಪಾಕಿಸ್ತಾನದಿಂದ ಬಂದವರೇ? ಇದಕ್ಕೆ ಪರಾವೆ ಏನಿದೆ? ದೇಶೀಯ ಭಯೋತ್ಪಾದಕರೂ ಈ ಕೃತ್ಯ ನಡೆಸಿರಬಹುದಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಈ ಹೇಳಿಕೆ ಬಳಿಕ ಬಿಜೆಪಿ ಕಾಂಗ್ರೆಸ್ ಅನ್ನು ಟೀಕಿಸಿದೆ. ಕಾಂಗ್ರೆಸ್ ಯಾವಾಗಲೂ ಶತ್ರುಗಳ ಪರವಾಗಿ ನಿಲ್ಲುತ್ತದೆ. ಪಾಕಿಸ್ತಾನಕ್ಕೆ ಕ್ಲೀನ್ ಚಿಟ್ ಕೊಡುತ್ತದೆ ಎಂದು ಆರೋಪಿತು. ದಾಳಿಯ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ ಏನು ಮಾಡಿದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸುತ್ತಿಲ್ಲ ಎಂದು ಚಿದಂಬರಂ ಹೇಳಿದ್ದಾರೆ.
ಸರ್ಕಾರವು ಭಯೋತ್ಪಾದಕರನ್ನು ಗುರುತಿಸಿದ್ದಾರೆಯೇ? ಅವರು ಪಾಕಿಸ್ತಾನದಿಂದ ಬಂದಿದ್ದಾರೆ ಎಂಬುದು ಖಚಿತವೇ? ಇದರೊಂದಿಗೆ, ಆಪರೇಷನ್ ಸಿಂಧೂರ್ ಸಮಯದಲ್ಲಿ ಉಂಟಾದ ನಷ್ಟವನ್ನು ಮರೆಮಾಚಿದ್ದಾರೆ ಎಂದು ಚಿದಂಬರಂ ಆರೋಪಿಸಿದರು. ಯುದ್ಧದಲ್ಲಿ ಎರಡೂ ಕಡೆಯವರು ನಷ್ಟ ಅನುಭವಿಸುತ್ತಾರೆ ಎಂದು ಚಿದಂಬರಂ ಹೇಳಿದರು. ವಿಶ್ವ ಯುದ್ಧದಲ್ಲಿ ಬ್ರಿಟನ್ ತನ್ನ ನಷ್ಟವನ್ನು ಪ್ರತಿದಿನ ಬಹಿರಂಗಪಡಿಸಿತು. ಭಾರತವೂ ಅದೇ ರೀತಿ ಮಾಡಬೇಕು. ಸರ್ಕಾರ ಎಲ್ಲವನ್ನೂ ಮರೆಮಾಚುತ್ತಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್ ನಾಯಕರು, ಸಂಸತ್ತಿನಲ್ಲಿ ಆಪರೇಷನ್ ಸಿಂಧೂರ್ ಬಗ್ಗೆ ಅವರು ಮಾತನಾಡುತ್ತಿಲ್ಲ ಎಂದು ಹೇಳಿದರು. ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಬಹುದಾದರೆ, ರ್ಯಾಲಿಗಳಲ್ಲಿ ಭಾಷಣ ಮಾಡಬಹುದಾದರೆ, ಅವರು ಸಂಸತ್ತಿನಲ್ಲಿ ಏಕೆ ಮಾತನಾಡುತ್ತಿಲ್ಲ ಎಂದು ಅವರು ಕೇಳಿದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ಕದನ ವಿರಾಮವನ್ನು ಭಾರತ ಸ್ವತಃ ಘೋಷಿಸಿಲ್ಲ, ಬದಲಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ ಎಂದು ಚಿದಂಬರಂ ಆರೋಪಿಸಿದರು. ಸರ್ಕಾರ ಇದರ ಬಗ್ಗೆ ಚರ್ಚಿಸಲು ಹೆದರುತ್ತಿದೆಯೇ? ಎಂದರು.
ಭಾರತ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಂಡಾಗಲೆಲ್ಲಾ, ಕಾಂಗ್ರೆಸ್ ನಾಯಕರು ಇಸ್ಲಾಮಾಬಾದ್‌ನ ರಕ್ಷಣೆಗೆ ನಿಂತಿರುವುದು ಕಂಡುಬರುತ್ತದೆ ಇದು ದುರದೃಷ್ಟಕರ ಎಂದು ಅಮಿತ್ ಮಾಳವೀಯ ಹೇಳಿದ್ದಾರೆ.
