-ಚಾಲನೆ ವೇಳೆ ಹೃದಯಾಘಾತ: ಚಾಲಕ ಸಾವು, ತಪ್ಪಿದ ಭಾರಿ ದುರಂತ.

ಮಡಿಕೇರಿ: ಬಸ್ ಚಲಾಯಿಸುತ್ತಿದ್ದ ವೇಳೆಯೇ ಹೃದಯಾಘಾತಕ್ಕೀಡಾಗಿ ಚಾಲಕ ಮೃತಪಟ್ಟ ದಾರುಣ ಘಟನೆ ಮಡಿಕೇರಿ ಸಮೀಪದ ತಾಳತ್ತಮನೆ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ಸಂಭವಿಸಿದೆ.
ಬೆಂಗಳೂರು ಮೂಲದ ಶಿವಕುಮಾರ್ (50) ಮೃತಪಟ್ಟ ಬಸ್ ಚಾಲಕ. ಶಿವಕುಮಾರ್ ಚಲಾಯಿಸುತ್ತಿದ್ದ ಈ ಬಸ್ ಇಂದು ಮುಂಜಾನೆ 4:45ರ ಸುಮಾರಿಗೆ ಮಡಿಕೇರಿಯಿಂದ ಸುಳ್ಯ ಕಡೆಗೆ ಪ್ರಯಾಣ ಬೆಳೆಸಿತ್ತು. ಬಸ್ ರಾಷ್ಟ್ರೀಯ ಹೆದ್ದಾರಿಯಲ್ಲಿ ತಾಳತ್ತಮನೆ ಬಳಿ ತಲುಪಿದಾಗ ಚಾಲಕ ಶಿವಕುಮಾರ್ ರಿಗೆ ಹೃದಯಾಘಾತವಾಗಿದೆ. ಇದರಿಂದ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಬಲಬದಿಯ ದರೆಗೆ ಢಿಕ್ಕಿಯಾಗಿ ವಾಲಿ ನಿಂತಿದೆ. ಬಸ್ಸಿನಲ್ಲಿದ್ದ ಸುಮಾರು 20 ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಶಿವಕುಮಾರ್ ಹೃದಯಾಘಾತವಾದ ಸ್ವಲ್ಪ ಹೊತ್ತಿನಲ್ಲೇ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.