ಗ್ಲೂ ಅಂಟು ವ್ಯಸನ ಮಾಡುತ್ತಿದ್ದಾತ ನಶೆಯಲ್ಲೇ ತಂದೆ, ಅಜ್ಜಿಗೆ ಹ*ಲ್ಲೆ

ಮುಂಬೈ : ಗ್ಲೂ (ಅಂಟು) ಎಳೆಯುವ ಚಟವಿದ್ದ ವ್ಯಕ್ತಿಯೊಬ್ಬ ನಶೆಯ ಅಮಲಿನಲ್ಲಿ ಅಪರಾಧ ಕೃತ್ಯವನ್ನುವೆಸಗಿದ್ದಾನೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಪಾರ್ಲಿ ನಗರದಲ್ಲಿ, ಅಂಟು ವ್ಯಸನಕ್ಕೆ ಒಳಗಾಗಿದ್ದ ವ್ಯಕ್ತಿಯೊಬ್ಬ ತನ್ನ ಹೆತ್ತವರು ಮತ್ತು ಅಜ್ಜಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ಅರ್ಬಾಜ್ ರಂಜಾನ್ ಖುರೇಷಿಗೆ ಗ್ಲೂ ಎಳೆಯುವ ಚಟವಿದೆ. ಆಗಾಗ ಆತ ಅಂಟು ಎಳೆದು ನಶೆಯಲ್ಲೇ ಇರುತ್ತಾನೆ. ಇತ್ತೀಚೆಗೆ ಅಂಟು ಖರೀದಿಸಲು ಹಣಬೇಕೆಂದು ಕುಟುಂಬದವರ ಬಳಿ ಕೇಳಿದ್ದಾನೆ. ಇದಕ್ಕೆ ಮನೆಯಲ್ಲಿ ನೀಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅರ್ಬಾಜ್ ಹೆತ್ತವರು ಹಾಗೂ ಅಜ್ಜಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾನೆ.
ನಶೆಯಲ್ಲಿದ್ದ ಅರ್ಬಾಜ್ ಚಾಕುವಿನಿಂದ ಹಲ್ಲೆ ನಡೆಸಿದ ಪರಿಣಾಮ ಆತನ ಅಜ್ಜಿ ಜುಬೇದಾ ಖುರೇಷಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪೋಷಕರು ಗಂಭೀರ ಗಾಯಗೊಂಡಿದ್ದು, ಅಂಬಾಜೋಗೈನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.
ಅರ್ಬಾಜ್ ನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.
ಅಂಟು ವ್ಯಸನ ಅಪಾಯಕಾರಿಯಾಗಿದ್ದು, ಇದು ಯುವ ವಯಸ್ಕರು ಮತ್ತು ಅಪ್ರಾಪ್ತ ವಯಸ್ಕರಲ್ಲಿ ಕಂಡು ಬರುತ್ತದೆ. ಅಂಟುಗಳು ಮತ್ತು ಬಣ್ಣ ತೆಳುಗೊಳಿಸುವ ವಸ್ತುಗಳಲ್ಲಿರುವ ಟೌಲೀನ್ ಎಂಬ ವಿಷಕಾರಿ ರಾಸಾಯನಿಕವು ಮೆದುಳಿನ ಜೀವಕೋಶಗಳಿಗೆ ಹಾನಿ ಮಾಡುತ್ತದೆ. ಇದು ಹೆಚ್ಚಾದರೆ ಶ್ರವಣದೋಷ, ಮೂತ್ರಪಿಂಡ ಮತ್ತು ಯಕೃತ್ತಿನ ಹಾನಿ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಿಗೆ ಕಾರಣವಾಗಬಹುದು.
