ತಂದೆಯ ಪುಣ್ಯತಿಥಿ ದಿನವೇ ಬಾಲಕಿಯ ಆತ್ಮಹತ್ಯೆ: ಕಾಸರಗೋಡಿನಲ್ಲಿ ದಾರುಣ ಘಟನೆ

ಕಾಸರಗೋಡು: ಹತ್ತನೇ ತರಗತಿ ವಿದ್ಯಾರ್ಥಿನಿಯೋರ್ವಳು ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂದಡ್ಕದಲ್ಲಿ ನಡೆದಿದೆ.

ಬಂದಡ್ಕ ಊಙತಡ್ಕದ ಸವಿತಾ ಎಂಬವರ ಪುತ್ರಿ ದೇವಿಕಾ (15) ಮೃತಪಟ್ಟವರು. ಕುಂಡಂಗುಳಿ ಹಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿನಿಯಾಗಿದ್ದಳು.
ಮಂಗಳವಾರ ದೇವಿಕಾಳ ತಂದೆ ಸತೀಶ್ ರ ಪುಣ್ಯತಿಥಿ ದಿನದಂದೇ ಕೃತ್ಯ ನಡೆಸಲಾಗಿದೆ. ಬೆಳಿಗ್ಗೆ ಅಜ್ಜಿ ಮತ್ತು ಸಹೋದರ ಮಾತ್ರ ಮನೆಯಲ್ಲಿದ್ದಾಗ ಘಟನೆ ನಡೆದಿದೆ. ತಾಯಿ ಸವಿತಾ ಬಂದಡ್ಕ ಗ್ರಾಮೀಣ ಬ್ಯಾಂಕ್ ಸಮೀಪ ಹೊಟೇಲ್ ನಡೆಸುತ್ತಿದ್ದಾರೆ.
ಬೆಳಿಗ್ಗೆ ದೇವಿಕಾ ನಾಪತ್ತೆಯಾದ ಹಿನ್ನಲೆಯಲ್ಲಿ ಸಹೋದರ ಶೋಧ ನಡೆಸಿದಾಗ ಸೀರೆಯಿಂದ ನೇಣು ಬಿಗಿದು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ದೇವಿಕಾ ಬಾಲ ಸಂಘದ ಸದಸ್ಯೆಯಾಗಿದ್ದಳು. ಬೇಡಡ್ಕ ಠಾಣಾ ಪೊಲೀಸರು ಭೇಟಿ ನೀಡಿದರು.
