ಬಾರ್‌ನಲ್ಲಿ ಯುವತಿ ಮತ್ತು ಬಾಯ್‌ಫ್ರೆಂಡ್ ಮೇಲೆ ಬೌನ್ಸರ್‌ಗಳಿಂದ ಹಲ್ಲೆ: ಇಬ್ಬರ ಬಂಧನ!

ಬೆಂಗಳೂರು: ನಗರದ ಬ್ರಿಗೇಡ್ ರಸ್ತೆಯ ಬಾರ್ ವೊಂದರಲ್ಲಿ ಬೌನ್ಸರ್ ಗಳು ಯುವತಿ ಹಾಗೂ ಆಕೆಯ ಬಾಯ್ ಫ್ರೆಂಡ್ ಮೇಲೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಈ ಸಂಬಂಧ ಬೌನ್ಸರ್ ಗಳಾದ ತ್ರಿಪುರಾದ ಹೃದಯ್ ದೇಬ್ ನಾಥ್ ಮತ್ತು ನೇಪಾಳದ ದೀಪೆನ್ ಖತ್ರಿ ಎಂಬವರನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದು, ತದನಂತರ ಸ್ಟೇಷನ್ ಬೇಲ್ ನಲ್ಲಿ ಬಿಡುಗಡೆ ಮಾಡಿದ್ದಾರೆ.
ಯುವತಿ ನೀಡಿರುವ ದೂರಿನ ಪ್ರಕಾರ, ಮಧ್ಯಾಹ್ನ ಊಟಕ್ಕಾಗಿ ತನ್ನ ತಂಗಿ ಹಾಗೂ ಆಕೆಯ ಬಾಯ್ ಫ್ರೆಂಡ್ ಮತ್ತು ಮತ್ತೋರ್ವ ಫ್ರೆಂಡ್ ಜೊತೆಗೆ ಬಾರ್ ಅಂಡ್ ರೆಸ್ಟೋರೆಂಟ್ ಗೆ ಹೋಗಿದ್ದಾಗ ಮೊದಲ ಪ್ಲೋರ್ ನಲ್ಲಿ ಊಟ ಮಾಡಿ ಬಿಲ್ ಪಾವತಿಸಿ, ಗ್ರೌಂಡ್ ಪ್ಲೋರ್ ಗೆ ಬಂದಾಗ ಗಲಾಟೆ ನಡೆಯಿತು ಎಂದು ತಿಳಿಸಿದ್ದಾರೆ.
ಗಲಾಟೆ ಕುರಿತು ಪ್ರತಿಕ್ರಿಯಿಸಿದ ಯುವತಿಯ ಬಾಯ್ ಫ್ರೆಂಡ್, ನಾವು ಮಾತನಾಡುವಾಗ ಬೌನ್ಸರ್ ಓರ್ವ ನನ್ನ ಗರ್ಲ್ ಫ್ರೆಂಡ್ ಜೊತೆಗೆ ಅನುಚಿತವಾಗಿ ಮಾತನಾಡುತ್ತಿರುವುದು ಕಂಡುಬಂದಿತು. ನಂತರ ಅದನ್ನು ಪ್ರಶ್ನಿಸಿದಾಗ ಇದಕ್ಕಿದ್ದಂತೆ ನಮ್ಮ ಮುಖಕ್ಕೆ ಬೌನ್ಸರ್ ಗಳು ಗುದ್ದಿದ್ದಾರೆ. ನನ್ನ ಫ್ರೆಂಡ್ ಬಂದಾಗ ಅವರ ಮೇಲೂ ಹಲ್ಲೆ ನಡೆಯಿತು. ಬೌನ್ಸರ್ ತಡೆಯಲು ಬಂದ ಯುವತಿಯನ್ನು ತಳ್ಳಿದ್ದರಿಂದ ಅವರಿಗೂ ಗಾಯವಾಗಿದೆ. ನಂತರ ಬಾರ್ ನಿಂದ ನಿರ್ಗಮಿಸಿದ ಮೇಲೂ ಹಿಂಬಾಲಿಸಿದ ಬೌನ್ಸರ್ ಗಳು ಎರಡನೇ ಬಾರಿ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಪೊಲೀಸರು ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ 78, 115 ಮತ್ತು 126 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಸ್ಟೇಷನ್ ಬೇಲ್ ಮೇಲೆ ಕಳುಹಿಸಲಾಗಿದೆ. ಮುಂದಿನ ತನಿಖೆ ನಡೆಯುತ್ತಿದ್ದು, ಸಿಸಿಟಿವಿ ದೃಶ್ಯಾವಳಿಗಳು ಅಪರಾಧ ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
