ಜರ್ಮನಿ ಎಚ್ಚರಿಕೆ: ಇರಾನ್ ಯುದ್ಧದಿಂದ ಜಾಗತಿಕ ಆರ್ಥಿಕತೆಗೆ ಅತಿದೊಡ್ಡ ಸಂಕಷ್ಟ; ರಾಜತಾಂತ್ರಿಕ ಪರಿಹಾರಕ್ಕೆ ಆಗ್ರಹ

ಕ್ಯಾನ್ ಬೆರಾ: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ಧದಿಂದ ವಿಶ್ವದ ಆರ್ಥಿಕತೆಗೆ ದೊಡ್ಡ ನಷ್ಟವಾಗುತ್ತಿದೆ. ಆದ್ದರಿಂದ ಈ ಯುದ್ಧವನ್ನು ರಾಜತಾಂತ್ರಿಕ ಮಾತುಕತೆ ಮೂಲಕ ಅಂತ್ಯಗೊಳಿಸಬೇಕು ಎಂದು ಜರ್ಮನಿಯ ರಕ್ಷಣಾ ಸಚಿವ ಬೋರಿಸ್ ಪಿಸ್ಟೋರಿಯಸ್ ಆಗ್ರಹಿಸಿದ್ದಾರೆ.
ಆಸ್ಟ್ರೇಲಿಯಾದ ಕ್ಯಾನ್ ಬೆರಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕದನ ವಿರಾಮ ಮಾತುಕತೆಗೆ ಜರ್ಮನಿ ಸಹಾಯ ಮಾಡಲು ಸಿದ್ಧವಿದೆ ಎಂದು ಹೇಳಿದ್ದಾರೆ.
“ನೇರವಾಗಿ ಹೇಳುವುದಾದರೆ, ಈ ಯುದ್ಧವು ವಿಶ್ವದ ಆರ್ಥಿಕತೆಗೆ ದೊಡ್ಡ ಹಾನಿ ಉಂಟುಮಾಡುತ್ತಿದೆ. ಕೇವಲ ಎರಡು ವಾರಗಳಲ್ಲೇ ಅದರ ಪರಿಣಾಮಗಳು ಈಗ ಕಾಣಿಸುತ್ತಿವೆ,’ ಎಂದು ಅವರು ಹೇಳಿದ್ದಾರೆ.

“ಈ ಯುದ್ಧ ಆರಂಭವಾದಾಗ ಯಾರೂ ನಮ್ಮನ್ನು ಸಂಪರ್ಕಿಸಲಿಲ್ಲ. ನಮ್ಮ ಅಭಿಪ್ರಾಯವೂ ಕೇಳಲಿಲ್ಲ. ಇದು ನಮ್ಮ ಯುದ್ಧವಲ್ಲ, ಆದ್ದರಿಂದ ನಾವು ಈ ಯುದ್ಧದಲ್ಲಿ ಭಾಗವಹಿಸಲು ಇಚ್ಚಿಸುವುದಿಲ್ಲ” ಎಂದು ಬೋರಿಸ್ ಪಿಸ್ಟೋರಿಯಸ್ ಹೇಳಿದ್ದಾರೆ.
“ಅಮೆರಿಕ ಮತ್ತು ಇರಾನ್ ತಕ್ಷಣವೇ ದಾಳಿ ನಿಲ್ಲಿಸಬೇಕು. ಯುದ್ಧ ನಿಂತರೆ, ಹಾರ್ಮುಝ್ ಜಲಸಂಧಿಯಲ್ಲಿ ಹಡಗುಗಳು ಸುಲಭವಾಗಿ ಸಂಚರಿಸುವಂತೆ ಮಾಡುವ ಬಗ್ಗೆ ಜರ್ಮನಿ ಮಾತನಾಡಲು ಸಿದ್ಧವಿದೆ. ಇನ್ನೂ ಯುದ್ಧ ನಿಂತಿಲ್ಲ. ಆದ್ದರಿಂದ ಬೇಗನೇ ಯುದ್ಧ ನಿಲ್ಲಿಸಬೇಕು ಎಂದು ನಾವು ಆಗ್ರಹಿಸುತ್ತೇವೆ,” ಎಂದು ಜರ್ಮನಿಯ ರಕ್ಷಣಾ ಸಚಿವ ಬೋರಿಸ್ ಕರೆ ನೀಡಿದ್ದಾರೆ.