ಗಾಝಾ ಬಿಕ್ಕಟ್ಟು: ಕದನ ವಿರಾಮದ ನಡುವೆಯೂ ತಲುಪದ ವೈದ್ಯಕೀಯ ನೆರವು; ಆಸ್ಪತ್ರೆಗಳಲ್ಲಿ ಔಷಧಿ ಖಾಲಿ, ಜನರೇಟರ್‌ಗಳು ಸ್ತಬ್ಧ

ಗಾಝಾ: ಕದನ ವಿರಾಮ ಜಾರಿಯಾಗಿ ಆರು ತಿಂಗಳು ಕಳೆದರೂ, ಗಾಝಾ ಪಟ್ಟಿಯ ಫೆಲೆಸ್ತೀನ್ ಜನತೆಗೆ ತಲುಪಬೇಕಾದ ಜೀವ ರಕ್ಷಕ ವೈದ್ಯಕೀಯ ಹಾಗೂ ಮಾನವೀಯ ನೆರವು ಇನ್ನೂ ತಡೆಯಲ್ಪಡುತ್ತಿದೆ ಎಂದು ‘ಮೆಡಿಕಲ್ ಏಯ್ಡ್ ಫಾರ್ ಫೆಲೆಸ್ತೀನಿಯನ್ಸ್’ (MAP) ಸಂಸ್ಥೆ ತಿಳಿಸಿದೆ.
ಲಂಡನ್ ಮೂಲದ ಈ ನೆರವು ಸಂಸ್ಥೆಯ ಪ್ರಕಾರ, ಇಸ್ರೇಲ್ ವಿಧಿಸಿರುವ ದಿಗ್ಧಂಧನದ ಪರಿಣಾಮವಾಗಿ ಗಾಝಾದಲ್ಲಿನ ಆಸ್ಪತ್ರೆಗಳು ಹಾಗೂ ಆರೋಗ್ಯ ಚಿಕಿತ್ಸಾಲಯಗಳು ತೀವ್ರ ಸರಬರಾಜು ಕೊರತೆಯ ನಡುವೆ ಕಾರ್ಯನಿರ್ವಹಿಸುತ್ತಿವೆ. ಅಗತ್ಯ ಔಷಧಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸಂಪೂರ್ಣವಾಗಿ ಸ್ಪಾಕ್ ನಲ್ಲಿಲ್ಲದಂತಾಗಿದ್ದು, ಶೇಕಡಾ 64 ರಷ್ಟು ಕ್ಯಾನ್ಸರ್ ಚಿಕಿತ್ಸೆಗೆ ಅಗತ್ಯವಾದ ಔಷಧಿಗಳು ಲಭ್ಯವಿಲ್ಲ.

ಗಾಝಾದಲ್ಲಿನ ಸುಮಾರು ಅರ್ಧದಷ್ಟು ಆಸ್ಪತ್ರೆಗಳು ಇನ್ನೂ ಸೇವೆಗಳನ್ನು ಮತ್ತೆ ಪ್ರಾರಂಭಿಸಿಲ್ಲ. ಇನ್ನೂ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಆಸ್ಪತ್ರೆಗಳಿಲ್ಲ ಎಂದು MAP ತಿಳಿಸಿದೆ. ಬಿಡಿಭಾಗಗಳು ಹಾಗೂ ಇಂಧನದ ಸರಬರಾಜು ನಿರ್ಬಂಧಿತವಾಗಿರುವುದರಿಂದ 90 ಆಸ್ಪತ್ರೆಗಳ ಜನರೇಟರ್ಗಳು ಸೇವೆಯಿಂದ ಹೊರಗುಳಿದಿವೆ ಎಂದು ಸಂಸ್ಥೆ ಹೇಳಿದೆ.
“ಸುಮಾರು 4,000 ಮಕ್ಕಳು ಸೇರಿದಂತೆ 18,500ಕ್ಕೂ ಹೆಚ್ಚು ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಇನ್ನೂ ತುರ್ತು ವೈದ್ಯಕೀಯ ಸ್ಥಳಾಂತರ ಅಗತ್ಯವಿದೆ. ಆದರೆ ಈ ಪ್ರಕ್ರಿಯೆಯೂ ತೀವ್ರವಾಗಿ ನಿರ್ಬಂಧಿತವಾಗಿದೆ” ಎಂದು MAP ತಿಳಿಸಿದೆ.