ಗಾಂಧೀಜಿ ಹೆಸರಿಗೆ ಕತ್ತರಿ; ಕೇಂದ್ರದ ವಿರುದ್ಧ ಡಿಕೆ ಶಿವಕುಮಾರ್ ಆಕ್ರೋಶ!

ಬೆಂಗಳೂರು: ಹುಟ್ಟಿದ ಸೂರ್ಯ ಮುಳುಗಲೇ ಬೇಕು. ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆಯುವುದರ ಮೂಲಕ ಕೇಂದ್ರ ಬಿಜೆಪಿ ಸರ್ಕಾರದ ಕೊನೆಯ ದಿನಗಳು ಪ್ರಾರಂಭವಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾಂವಿಧಾನಿಕವಾಗಿ ಕಾಂಗ್ರೆಸ್ ಪಕ್ಷ ನೀಡಿದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಕಾರ್ಯಕ್ರಮವನ್ನು ಬಿಜೆಪಿ ಮುಟ್ಟುವ ಧೈರ್ಯ ಮಾಡುತ್ತದೆ ಎಂದುಕೊಂಡಿರಲಿಲ್ಲ. ಆದರೆ ಈಗ ಮನರೇಗಾ ಹೆಸರನ್ನು ಬದಲಾವಣೆ ಮಾಡಿರುವುದು ನೋಡಿದರೆ ಬಿಜೆಪಿಯ ಅಂತ್ಯ ಪ್ರಾರಂಭವಾಗಿದೆ ಎಂದು ನನಗೆ ಅನಿಸುತ್ತಿದೆ ಎಂದರು.

ಬಡವರಿಗೆ ಕೊಟ್ಟ ಕಾರ್ಯಕ್ರಮದ ಕುತ್ತಿಗೆ ಹಿಸುಕುವ ಕೆಲಸ ಮಾಡಲಾಗುತ್ತಿದೆ. ದೇಶದ ಬಡಜನತೆಗೆ ಎಸಗುತ್ತಿರುವ ದ್ರೋಹವಿದು. ಇದಕ್ಕಿಂತ ದೊಡ್ಡ ಅವಮಾನವಿಲ್ಲ. ಡಿ.27 ರಂದು ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಮುಂದಿನ ಹೋರಾಟದ ಬಗ್ಗೆ ತೀರ್ಮಾನ ಮಾಡಲಾಗುತ್ತದೆ. ಹೆಸರು ಬದಲಾವಣೆ ಹಿಂಪಡೆಯುವ ತನಕ ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕ ಹೋರಾಟ ರೂಪಿಸಲಾಗುವುದು ಎಂದು ಶಿವಕುಮಾರ್ ಹೇಳಿದರು.

ಅತ್ಯುತ್ತಮ ಯೋಜನೆಯನ್ನು ಕೊಲೆ, ಸಮಾಧಿ ಮಾಡಲಾಗಿದೆ: ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ದಿಲ್ಲಿಯಲ್ಲಿ ಮಂಗಳವಾರ ಸಭೆ ಕರೆದಿದ್ದಾರೆ. ಅಲ್ಲಿ ಇದರ ಬಗ್ಗೆ ಚರ್ಚೆ ನಡೆಸಲಾಗುವುದು. ಕೇಂದ್ರ ಸರಕಾರ ಹೇಳಿದ ಅನುಪಾತದಲ್ಲಿ ಯಾವ ರಾಜ್ಯ ಸರಕಾರವೂ ಹಣ ನೀಡಲು ಸಾಧ್ಯವಿಲ್ಲ. ಈ ರೀತಿ ಆದರೆ ಕಾರ್ಯಕ್ರಮ ಸತ್ತು ಹೋದಂತೆ. ಇದನ್ನು ಸಮಾಧಿ ಮಾಡಲಾಗಿದೆ. ಕೊಲೆ ಮಾಡಲಾಗಿದೆ ಎಂದು ಉಪ ಮುಖ್ಯಮಂತ್ರಿ ಟೀಕಿಸಿದರು.

ಸರಕಾರ ಮತ್ತು ಪಕ್ಷ ಒಟ್ಟಾಗಿ ಹೋರಾಡಲಿದೆ: ಸರಕಾರ ಮತ್ತು ಪಕ್ಷ ಒಟ್ಟಾಗಿ ನರೇಗಾ ಯೋಜನೆಯ ವಿರುದ್ಧ ಕೇಂದ್ರ ಬಿಜೆಪಿ ಸರಕಾರ ತೆಗೆದುಕೊಂಡಿರುವ ತೀರ್ಮಾನ ವಿರೋಧಿಸಿ ಹೋರಾಟ ಮಾಡುತ್ತೇವೆ. ಪಂಚಾಯತಿಗೆ, ಮತದಾರರಿಗೆ, ಉದ್ಯೋಗ ಖಾತ್ರಿ ಯೋಜನೆ ಫಲಾನುಭವಿಗಳಿಗೆ ನೀಡಿರುವ ಹಕ್ಕನ್ನು ಕಾಂಗ್ರೆಸ್ ಪಕ್ಷ ಕಾಪಾಡಲಿದೆ. ಇದರ ಬಗ್ಗೆ ರಾಜ್ಯದ ಎಲ್ಲ ಗ್ರಾಮಪಂಚಾಯತಿಗಳ ಮುಖಂಡರನ್ನು ಪಕ್ಷಾತೀತವಾಗಿ ಕರೆದು ಅವರ ಬಳಿ ಚರ್ಚೆ ನಡೆಸಲಾಗುವುದು ಎಂದು ಅವರು ಹೇಳಿದರು.
ಇಡೀ ಭಾರತದಲ್ಲಿಯೆ ನನ್ನ ಕನಕಪುರ ಕ್ಷೇತ್ರ ಅತಿ ಹೆಚ್ಚು ನರೇಗಾ ಕಾಮಗಾರಿಗಳನ್ನು ಕೈಗೊಂಡಿದೆ. ಜನರು ಇದರ ಮೇಲೆ ಎಷ್ಟು ಅವಲಂಬಿತರಾಗಿದ್ದಾರೆ ಎನ್ನುವುದು ನಮಗೆ ಗೊತ್ತು ಎಂದರು.