ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಪೂಂಚ್‌ನಲ್ಲಿ ಮತ್ತೆ ಎನ್‌ಕೌಂಟರ್: ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಪಹಲ್ಗಾಮ್ ದಾಳಿಯ ಪಾತಕಿ ಹಾಶಿಮ್ ಮೂಸಾ ಹತ್ಯೆ ಬೆನ್ನಲ್ಲೇ ಮತ್ತಿಬ್ಬರು ಉಗ್ರರನ್ನ ಸೇನೆ ಬೇಟೆಯಾಡಿದೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನಲ್ಲಿ ಇಂದು ಬೆಳಗ್ಗೆ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರರನ್ನ ಯೋಧರು ಹೊಡೆದುರುಳಿಸಿದ್ದಾರೆ.

ಹತ್ಯೆಯಾದ ಇಬ್ಬರು ಉಗ್ರರು ಕಾಶ್ಮೀರದ ಪೂಂಚ್ ಜಿಲ್ಲೆಯ ದೇಗ್ವಾರ್ ಸೆಕ್ಟರ್‌ನ ನಿಯಂತ್ರಣ ರೇಖೆಯ ಬಳಿ ಒಳನುಸುಳಲು ಯತ್ನಿಸಿದ್ದರು. ಭಾರೀ ಮಳೆ ನಡುವೆಯೂ ಮೂವರು ಪಿಓಕೆ ಕಡೆಯಿಂದ ಗಡಿ ದಾಟಲು ಯತ್ನಿಸಿದ್ದರು. ಪೂಂಚ್ ಪ್ರದೇಶದಲ್ಲಿ ಬೇಲಿಯ ಉದ್ದಕ್ಕೂ ಇಬ್ಬರು ಶಂಕಿತರ ಚಲನವಲನ ಪತ್ತೆಯಾಗಿತ್ತು. ಭದ್ರತಾ ಪಡೆಗಳ ಎಚ್ಚರಿಕೆ ಬಳಿಕವೂ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿದಾಳಿ ನಡೆಸಿದ ಭದ್ರತಾಪಡೆ ಉಗ್ರರನ್ನ ಹೊಡೆದುರುಳಿಸಿದೆ.
ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಉಗ್ರರ ಬೇಟೆ ಯಶಸ್ವಿಯಾಗಿದೆ. ಮೂವರು ಉಗ್ರರು ಒಳನುಸುಳಿದ್ದು, ಇಬ್ಬರನ್ನು ಹತ್ಯೆ ಮಾಡಲಾಗಿದೆ. ಉಳಿದ ಒಬ್ಬನಿಗಾಗಿ ಶೋಧ ಮುಂದುವರಿದಿದೆ.
ಎರಡು ದಿನಗಳ ಹಿಂದೆಯಷ್ಟೇ ʻಆಪರೇಷನ್ ಮಹಾದೇವ್ʼ ಹೆಸರಿನಲ್ಲಿ ನಡೆದ ಪ್ರಮುಖ ಕಾರ್ಯಾಚರಣೆಯಲ್ಲಿ ಭದ್ರತಾ ಪಡೆಗಳು ಶ್ರೀನಗರದ ಲಿಡ್ವಾಸ್ ಪ್ರದೇಶದಲ್ಲಿ ಮೂವರು ಉಗ್ರರನ್ನ ಹತ್ಯೆಗೈದಿದ್ದವು. ಈ ಪೈಕಿ ಓರ್ವ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಎಂಬುದು ಖಚಿತವಾಗಿದೆ.
ಪಾತಕಿ ಹಾಶಿಮ್ ಮೂಸಾ ಯಾರು?
ಹಾಶಿಮ್ ಮೂಸಾ ಪಾಕಿಸ್ತಾನ ಸೇನೆಯ ಹಿನ್ನೆಲೆ ಹೊಂದಿದ್ದಾನೆ. ಪಹಲ್ಗಾಮ್ ದಾಳಿಯಲ್ಲಿ ISI ಪಾತ್ರದ ಇರುವುದಕ್ಕೆ ಇದು ಪ್ರಬಲ ಸಾಕ್ಷಿಯಾಗಿದೆ. ಪಾಕಿಸ್ತಾನದ ಪ್ಯಾರಾ ಕಮಾಂಡೊ ಆಗಿದ್ದ ಮೂಸಾ ವಿಶೇಷ ತರಬೇತಿ ಪಡೆದಿದ್ದ. ಲಷ್ಕರ್-ಎ-ತೈಬಾದಲ್ಲೂ ಪ್ರಮುಖನಾಗಿ ಗುರುತಿಸಿಕೊಂಡಿದ್ದ, ಅದಕ್ಕಾಗಿಯೇ ಸ್ಥಳೀಯರಲ್ಲದವರನ್ನ ಕೊಲ್ಲಲು, ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಮೂಸಾನನ್ನ ಭಾರತಕ್ಕೆ ಕಳುಹಿಸಲಾಗಿತ್ತು. ಹಾಶೀಮ್ ಮೂಸಾ LeT ಸಂಘಟನೆಗೆ ಸೇರಿದವನಾಗಿದ್ದು, SSG ಕಮಾಂಡೋ ಯುದ್ಧದಲ್ಲಿ ಪರಿಣತಿ ಹೊಂದಿದ್ದ ಎಂದು ತಿಳಿದುಬಂದಿದೆ.
