ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಎಫ್‌ಐಆರ್ ದಾಖಲು: ವಂಚನೆ ಹಾಗೂ ನಂಬಿಕೆ ದ್ರೋಹದ ಆರೋಪ

ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕರ ಸಾಲಿನಲ್ಲಿ ನಿಲ್ಲುವ ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ವಿರುದ್ಧ ಎಫ್‌ಐಆರ್ ದಾಖಲಾಗಿದೆ. ‘ದೇವದಾಸ್’, ‘ಹಮ್ ದಿಲ್ ದೇಚುಕೆ ಸನಮ್’, ‘ಸಾವರಿಯಾ’, ‘ರಾಮ್ಲೀಲಾ’, ‘ಬ್ಲಾಕ್’ ಇನ್ನೂ ಹಲವು ಕ್ಲಾಸಿಕ್ ಸಿನಿಮಾಗಳನ್ನು ನೀಡಿರುವ ಸಂಜಯ್ ಲೀಲಾ ಬನ್ಸಾಲಿ ಮೇಲೆ ಇದೀಗ ವಂಚನೆ ಹಾಗೂ ನಂಬಿಕೆ ದ್ರೋಹದ ಆರೋಪ ಕೇಳಿ ಬಂದಿದೆ.

ಸಂಜಯ್ ಲೀಲಾ ಬನ್ಸಾಲಿ ಪ್ರಸ್ತುತ ‘ಲವ್ ಆಂಡ್ ವಾರ್’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಸಿನಿಮಾನಲ್ಲಿ ಆಲಿಯಾ ಭಟ್, ರಣ್ಬೀರ್ ಕಪೂರ್, ವಿಕ್ಕಿ ಕೌಶಲ್ ಅವರುಗಳು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಚಾಲ್ತಿಯಲ್ಲಿದೆ ಆದರೆ ಇದೀಗ ಸಿನಿಮಾದ ಭಾಗವಾಗಿದ್ದ ವ್ಯಕ್ತಿಯೊಬ್ಬರು ಸಂಜಯ್ ಲೀಲಾ ಬನ್ಸಾಲಿಯ ವಿರುದ್ಧ ದೂರು ನೀಡಿದ್ದಾರೆ.
ಸಿನಿಮಾದ ಲೈನ್ ಪ್ರೊಡ್ಯೂಸರ್ ಆಗಿ ಹಾಸ್ಪಿಟಾಲಿಟಿ ಸಂಸ್ಥೆಯ ಸಿಇಓ ರಾಜ್ ಮಾಥುರ್ ಅವರನ್ನು ಸಂಜಯ್ ಲೀಲಾ ಬನ್ಸಾಲಿ ನೇಮಿಸಿದ್ದರು. ಆದರೆ ಇತ್ತೀಚೆಗಷ್ಟೆ ರಾಜ್ ಮಾಥುರ್ ಅವರನ್ನು ಲೈನ್ ಪ್ರೊಡ್ಯೂಸರ್ ಸ್ಥಾನದಿಂದ ತೆಗೆದು ಹಾಕಲಾಗಿದೆಯಂತೆ. ಇದೇ ವಿಷಯವಾಗಿ ರಾಜ್ ಮಾಥುರ್ ದೂರು ನೀಡಿದ್ದು, ಸಂಜಯ್ ವಿರುದ್ಧ ವಂಚನೆ ಹಾಗೂ ದ್ರೋಹದ ಆರೋಪ ಹೊರಿಸಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ಮಾತ್ರವೇ ಅಲ್ಲದೆ ಸಿನಿಮಾಕ್ಕೆ ಸಂಬಂಧಿಸಿದ ಅರವಿಂದ್ ಗಿಲ್ ಮತ್ತು ಉತ್ಕರ್ಷ್ ಬಾಲಿ ವಿರುದ್ಧವೂ ಸಹ ದೂರು ದಾಖಲಾಗಿದ್ದು, ಹಣಕಾಸು ವಂಚನೆ, ನಂಬಿಕೆ ದ್ರೋಹ ಆರೋಪಗಳಡಿ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ. ರಾಜ್ ಮಾಥುರ್ ಆರೋಪಿಸಿರುವಂತೆ, ಮೊದಲಿಗೆ ರಾಜ್ ಮಾಥುರ್ ಅವರನ್ನು ‘ಲವ್ ಆಂಡ್ ವಾರ್’ ಸಿನಿಮಾದ ಲೈನ್ ಪ್ರೊಡ್ಯೂಸರ್ ಆಗಿ ಒಪ್ಪಂದ ಮಾಡಿಕೊಳ್ಳಲಾಯ್ತಂತೆ. ಬಳಿಕ ವಿನಾಕಾರಣ ಅವರನ್ನು ತೆಗೆದು ಹಾಕಲಾಯ್ತಂತೆ. ತಮಗೆ ಸಂಬಳ ಸಹ ನೀಡದೆ ತೆಗೆದು ಹಾಕಲಾಗಿದೆ ಎಂದು ರಾಜ್ ಆರೋಪ ಮಾಡಿದ್ದಾರೆ.
ರಾಜಸ್ಥಾನದಲ್ಲಿ ಶೂಟಿಂಗ್ ಮಾಡುವ ವೇಳೆ ತಮಗೆ ಬನ್ಸಾಲಿಯ ಪ್ರೊಡಕ್ಷನ್ ಹೌಸ್ನಿಂದ ಇಮೇಲ್ ಬಂದಿತ್ತು. ಅದರಂತೆ ನಾನು ರಾಜಸ್ಥಾನದಲ್ಲಿ ಸಿನಿಮಾ ಶೂಟಿಂಗ್ಗೆ ಬೇಕಾದ ಎಲ್ಲ ವ್ಯವಸ್ಥೆ ಮಾಡಿದೆ. ನಟ-ನಟಿಯರ ಭದ್ರತೆ, ಚಿತ್ರತಂಡದ ವಸತಿ, ಆಹಾರ ಎಲ್ಲದರ ವ್ಯವಸ್ಥೆ ಮಾಡಿದ್ದೆ. ಶೂಟಿಂಗ್ಗೆ ಬೇಕಾದ ಒಪ್ಪಿಗೆಗಳನ್ನು ಸರ್ಕಾರದಿಂದ ಪಡೆದುಕೊಂಡೆ, ಆದರೆ ಚಿತ್ರೀಕರಣದ ಬಳಿಕ ನನ್ನನ್ನು ತೆಗೆದು ಹಾಕಲಾಗಿದೆ. ನಾನು ಸಂಜಯ್ ಲೀಲಾ ಬನ್ಸಾಲಿಯವರನ್ನು ಭೇಟಿ ಆಗಲು ಯತ್ನಿಸಿದೆ. ಆದರೆ ಬನ್ಸಾಲಿ ಪ್ರೊಡಕ್ಷನ್ ಹೌಸ್ನ ಮ್ಯಾನೇಜರ್ಗಳಾದ ಉತ್ಕರ್ಷ್ ಬಾಲಿ ಮತ್ತು ಅರವಿಂದ್ ಗಿಲ್ ನನ್ನೊಟ್ಟಿಗೆ ಕೆಟ್ಟದಾಗಿ ನಡೆದುಕೊಂಡರು ಎಂದು ರಾಜ್ ಮಾಥುರ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
