ಕಸ ಹಾಕದಿದ್ದರೆ ದಂಡ, ಬೆಂಗಳೂರನ್ನು ಸ್ವಚ್ಛವಾಗಿಡಲು ಬಿಬಿಎಂಪಿ ಹೊಸ ಕ್ರಮ

ಬೆಂಗಳೂರು- ಮನೆ ಮುಂದೆ ಬರುವ ಕಸದ ವಾಹನಗಳಿಗೆ ಕಸ ನೀಡದಿರುವ ಮನೆಗಳ ಮಾಲೀಕರ ಮೇಲೆ ದಂಡ ಪ್ರಯೋಗಿಸುವ ಸಾಹಸಕ್ಕೆ ಬಿಬಿಎಂಪಿ ಕೈ ಹಾಕಿದೆ. ಕಸದ ವಾಹನಗಳು ಸಂಗೀತ ಹಾಕಿಕೊಂಡು ಮನೆ ಮುಂದೆ ಬಂದರೂ ಜನ ಮಾತ್ರ ಕಸದ ಗಾಡಿಗಳಿಗೆ ಕಸ ಹಾಕದೆ ಬೀದಿ ಬದಿಗಳಲ್ಲಿ ಎಸೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಧಿಕಾರಿಗಳು ಇದೀಗ ಕಸದ ಗಾಡಿಗಳಿಗೆ ಕಸ ಹಾಕದಿರುವ ಮನೆಗಳಿಗೆ ದಂಡ ಹಾಕಲು ಮುಂದಾಗಿದೆ.

ಮನೆ..ಮನೆಗೆ ಕಸ ಸಂಗ್ರಹಿಸಲು ಪೌರಕಾರ್ಮಿಕರು ಬಂದಾಗ ಕಸ ನೀಡಬೇಕು..ಇಲ್ಲವಾದ್ರೆ, ಮನೆ ಮಾಲೀಕರಿಗೆ ನೋಟೀಸ್ ಅಥವಾ ದಂಡ ಪ್ರಯೋಗ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಎಚ್ಚರಿಸಿದ್ದಾರೆ.
ಕಳೆದ ವಾರ ಸ್ವಚ್ಛ ಸರ್ವೇಕ್ಷಣ ವರದಿಯಲ್ಲಿ ದೇಶದ 4 ನೇ ಕಲುಷಿತ ನಗರ ಎಂಬ ಕಳಂಕ ಬೆಂಗಳೂರಿಗೆ ಬಂದಿತ್ತು. ಇದರಿಂದ ಕಸ ಸಂಗ್ರಹಣೆಯಲ್ಲಿ ಬೆಂಗಳೂರಿನ ಮಾನಮರ್ಯಾದೆ ಮೂರು ಕಾಸಿಗೆ ಹಾರಾಜಾಗಿತ್ತು.
ಈ ಕಳಂಕ ತಪ್ಪಿಸಲು ಡಿಸಿಎಂ ನೇತೃತ್ವದಲ್ಲಿ ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ದಂಡ ಪ್ರಯೋಗ ಅಸ್ತ್ರ ಪ್ರಯೋಗಿಸಲು ತೀರ್ಮಾನಿಸಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಜೊತೆಗೆ ಹಾಟ್‌ಸ್ಪಾಟ್‌ಗಳನ್ನು ಗುರುತಿಸಿ ಮಾರ್ಷಲ್ ನಿಯೋಜನೆ ಮಾಡುವುದು.ಪೊಲೀಸ್ ಇಲಾಖೆ ಸಹಯೋಗದೊಂದಿಗೆ ರಾತ್ರಿ ವೇಳೆ ಗಸ್ತು ತಿರುಗುವುದು..ರಸ್ತೆಗಳಲ್ಲಿ ಕಸ ಹಾಕುವವರ ವಿರುದ್ಧ ದಂಡ ಪ್ರಯೋಗದ ಜೊತೆಗೆ ಕಟ್ಟಡಗಳ ತ್ಯಾಜ್ಯ ವಿಲೇವಾರಿಗೂ ಬ್ರೇಕ್ ಹಾಕುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಕಟ್ಟಡ ನಿರ್ಮಿಸುವವರು ಇನ್ನು ಮುಂದೆ ಕಟ್ಟಡಗಳ ಅವಶೇಷಗಳ ವಿಲೇವಾರಿಗೆ ಹಣ ವಸೂಲಿ ಮಾಡುವುದು ಹಾಗೂ ಅವಶೇಷಗಳನ್ನು ಪಾಲಿಕೆ ನಿಗದಿಪಡಿಸಿದ ಕ್ವಾರೆಯಲ್ಲೇ ವಿಲೇವಾರಿ ಮಾಡಬೇಕು ಎಂಬ ಷರತ್ತು ವಿಧಿಸುವ ಸಾಧ್ಯತೆಗಳಿವೆ.
