ಕ್ರಿಮಿನಾಶಕ ಸಿಂಪಡಿಸಿದ ತರಕಾರಿ ಸೇವಿಸಿ ತಂದೆ-ಇಬ್ಬರು ಮಕ್ಕಳು ಸಾವು, ಕುಟುಂಬಕ್ಕೆ ಫುಡ್ ಪಾಯಿಸನ್!

ರಾಯಚೂರು : ಜವರಾಯ ಯಾವಾಗ ಎಲ್ಲಿ ಹೇಗೆ ಬರುತ್ತಾನೆ ಎನ್ನುವುದು ಯಾರಿಗೂ ಗೊತ್ತಿಲ್ಲ. ರಾತ್ರಿ ಊಟ ಮಾಡಿ ಮಲಗಿದ ಕುಟುಂಬದ ಮೂರು ಸದಸ್ಯರು ಬೆಳಗಾಗೊ ಹೊತ್ತಿಗೆ ಜವರಾಯನ ಅಟ್ಟಹಾಸಕ್ಕೆ ಬಲಿಯಾಗಿದ್ದಾರೆ. ಆಹಾರದಲ್ಲಿ ಊಟಕ್ಕೆ ಬಳಸಿದ ತರಕಾರಿಯೇ ಜೀವಕ್ಕೆ ಮುಳುವಾಯ್ತಾ..?

ಹೌದು, ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ಫುಡ್ ಪಾಯಿಸನ್ನಿಂದ ಕುಟುಂಬದ ಆರು ಜನ ಅಸ್ವಸ್ಥರಾಗಿದ್ದರು. ಈ ಪೈಕಿ ತಂದೆ ಹಾಗೂ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. 38 ವರ್ಷದ ರಮೇಶ್, 8 ವರ್ಷದ ನಾಗಮ್ಮ ,6 ವರ್ಷದ ದೀಪಾ ಮೃತ ದುರ್ದೈವಿಗಳು. ಪತ್ನಿ ಪದ್ಮಾ ಹಾಗೂ ಇಬ್ಬರು ಮಕ್ಕಳಾದ ಕೃಷ್ಣ, ಚೈತ್ರಾ ರನ್ನ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಕುಟುಂಬದ ಎಲ್ಲರಿಗೂ ರಾತ್ರಿ ಎರಡು ಗಂಟೆ ವೇಳೆಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಅಕ್ಕ ಪಕ್ಕದ ಮನೆಯವರನ್ನು ಸಹಾಯಕ್ಕೆ ಕರೆದಿದ್ದಾರೆ. ತಕ್ಷಣವೇ ಕುಟುಂಬದ ಎಲ್ಲಾ ಸದಸ್ಯರನ್ನು ಲಿಂಗಸುಗೂರು ಆಸ್ಪತ್ರೆಗೆ ದಾಖಲಿಸುವ ಹೊತ್ತಿಗೆ ಪರೀಸ್ಥಿತಿ ಕೈ ಮೀರಿ ಹೋಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ತಂದೆ ಮಕ್ಕಳು ಮೃತಪಟ್ಟಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಈ ವೇಳೆ 6 ವರ್ಷದ ದೀಪು ಮಾರ್ಗ ಮಧ್ಯ ಅಸುನೀಗಿದ್ದಾಳೆ.
ಇನ್ನೂ ತಮ್ಮದೇ ಜಮೀನಿನಲ್ಲಿ ಬೆಳೆದಿದ್ದ ಚವಳೆಕಾಯಿ ಪಲ್ಯ, ರೊಟ್ಟಿ, ಅನ್ನ, ಸಾಂಬರ್ ಊಟ ಮಾಡಿದ್ದ ಕುಟುಂಬ ಮಧ್ಯರಾತ್ರಿ ವೇಳೆಗೆ ಅಸ್ವಸ್ಥಗೊಂಡಿದೆ. ಜಮೀನಿನಲ್ಲಿ ಬೆಳೆದ ಚವಳೆಕಾಯಿಗೆ ಎರಡು ದಿನಗಳ ಕೆಳಗೆ ಕ್ರಿಮಿನಾಶಕ ಸಿಂಪಡಣೆ ಮಾಡಲಾಗಿತ್ತು. ಅದೇ ಚವಳೆಕಾಯಿಯ ಪಲ್ಯ ಊಟ ಮಾಡಿದ್ದರಿಂದಲೇ ಫುಡ್ ಪಾಯಿಸನ್ ಆಗಿರಬಹುದು ಎಂದು ಸಂಬಂಧಿಕರು ತಿಳಿಸಿದ್ದಾರೆ. ಅಸ್ವಸ್ಥಗೊಂಡವರಿಗೆ ಚಿಕಿತ್ಸೆ ಮುಂದುವರೆದಿದ್ದು ಕ್ರಿಮಿನಾಶಕ ಕಾರಣಕ್ಕೆ ಅಸ್ವಸ್ಥರಾಗಿದ್ದಾರೆ ಅಂತ ರಿಮ್ಸ್ ವೈದ್ಯರು ಕೂಡಾ ತಿಳಿಸಿದ್ದಾರೆ. ಯಾವ ವಿಷಕಾರಕ ವಸ್ತುಗಳು ದೇಹಕ್ಕೆ ಸೇರಿವೆ ಅನ್ನೋದು ಇನ್ನೂ ತಿಳಿದುಬಂದಿಲ್ಲ ಎನ್ನುತ್ತಾರೆ.
ರಾತ್ರಿ ಊಟ ಮಾಡಿ ಮಲಗಿದ ಕುಟುಂಬ ಬೆಳಗಾಗುವಷ್ಟರಲ್ಲಿ ದುರಂತ ಅಂತ್ಯ ಕಂಡಿದೆ. ಮನೆ ಮಾಲಿಕ, ಮತ್ತು ಮಕ್ಕಳನ್ನೇ ಕಳೆದುಕೊಂಡಿದೆ. ಈ ಒಂದು ದುರ್ಘಟನೆಗೆ ಮುಖ್ಯವಾಗಿ ಯಾವ ವಿಷ ಪದಾರ್ಥ ಕಾರಣ ಎಂಬುದು ತಿಳಿದು ಬರಬೇಕಿದೆ
