ಕೌಟುಂಬಿಕ ಕಲಹ: ಎರಡು ತಿಂಗಳ ಗರ್ಭಿಣಿ ಆತ್ಮಹತ್ಯೆ

ಚಿತ್ರದುರ್ಗ : ಕೌಟುಂಬಿಕ ಕಲಹ ಹಿನ್ನೆಲೆ 2 ತಿಂಗಳ ಗರ್ಭಿಣಿ ನೇಣಿಗೆ ಶರಣಾಗಿರುವ ಘಟನೆ ಚಿತ್ರದುರ್ಗ ತಾಲೂಕಿನ ಕಾಟಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಪುಷ್ಪ (25) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಮಹಿಳೆ.


ಕಾಟಿಹಳ್ಳಿ ಗ್ರಾಮದ ಹರೀಶ್ ನಗರದ ಖಾಸಗಿ ಗಾರ್ಮೆಂಟ್ಸ್ ಕಾರ್ಮಿಕನಾಗಿದ್ದ. ಈ ವೇಳೆ ಈ ಗಾರ್ಮೆಂಟ್ಸ್ಗೆ ತೆರಳ್ತಿದ್ದ ಪುಷ್ಪ ಹಾಗೂ ಹರೀಶ್ ಮಧ್ಯೆ ಪ್ರೇಮಾಂಕುರವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದರು. ಆದ್ರೆ ಅನ್ಯಜಾತಿ ಎಂಬ ಕಾರಣಕ್ಕೆ ಹರೀಶ್ ಹಾಗೂ ಪುಷ್ಪ ಪೋಷಕರ ಮಧ್ಯೆ ತಾರತಮ್ಯ ಭಾವವಿದ್ದು, ಹರೀಶ್ ಮನೆಗೆ ಪುಷ್ಪ ಪೋಷಕರಿಗೆ ಎಂಟ್ರಿ ಇರಲಿಲ್ಲ. ಆದರೂ ಎದೆಗುಂದದೇ ಪತಿಯೇ ಪರದೈವ ಎಂದು ನಂಬಿ ಸತತ ಎರಡು ವರ್ಷಗಳಿಂದ ಅನ್ಯೋನ್ಯವಾಗಿದ್ದ ಪುಷ್ಪ ಹಾಗೂ ಹರೀಶ್ಗೆ ಒಂದೂವರೆ ವರ್ಷದ ಒಂದು ಮದ್ದಾದ ಗಂಡು ಮಗುವಿದೆ.

ಈ ಮದ್ಯೆ, ಸಣ್ಣಪುಟ್ಟ ವಿಚಾರಕ್ಕೆ ಪದೇ ಪದೇ ಕೌಟಂಬಿಕ ಕಲಹ ಶುರುವಾಗಿದ್ದು, ಪರಸ್ಪರ ವಿಚ್ಛೇದನ ಪಡೆಯುವ ಮಟ್ಟಕ್ಕೆ ತಿರುಗಿತ್ತು. ಹೀಗಾಗಿ ಕಳೆದ ಎರಡು ದಿನಗಳ ಹಿಂದೆಯಷ್ಟೇ ದಂಪತಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆಗ ರಾಜಿಸಂಧಾನದೊಂದಿಗೆ ಮನೆಗೆ ತೆರಳಿದ್ದ ಪುಷ್ಪ ನೇಣಿಗೆ ಶರಣಾಗಿದ್ದಾಳೆ. ಈ ವೇಳೆ ಮನೆಯಲ್ಲಿದ್ದ ಪತಿ ಹರೀಶ್ ಅಸ್ವಸ್ಥಳಾಗಿದ್ದ ಪತ್ನಿಯನ್ನು ಆಸ್ಪತ್ರೆಗೆ ಸೇರಿಸುವ ಮಾರ್ಗಮಧ್ಯೆ ಪುಷ್ಪ ಕೊನೆಯುಸಿರೆಳೆದಿದ್ದಾಳೆ. ಇನ್ನು ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಹರೀಶ್ ಎಸ್ಕೇಪ್ ಆಗಿದ್ದಾನೆ.