ಉಡುಪಿಯ ಕಡಿಯಾಳಿ ದೇಗುಲದಲ್ಲಿ ಕಳ್ಳತನ ವಿಫಲ ಯತ್ನ: ಇಬ್ಬರು ಕೇರಳ ಮೂಲದ ಆರೋಪಿಗಳು ಸೆರೆ!

ಉಡುಪಿ: ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನದ ಹೆಬ್ಬಾಗಿಲಿನ ಬೀಗ ಮುರಿದು ಕಳ್ಳತನಗೈಯುಲು ವಿಫಲ ಯತ್ನ ನಡೆಸಿದ ಘಟನೆ ಶನಿವಾರ ಮುಂಜಾವ 3 ಗಂಟೆ ಸುಮಾರಿಗೆ ನಡೆದಿದೆ.

ಕಳ್ಳರ ಕೃತ್ಯ ಗಮನಿಸಿದ ದೇವಸ್ಥಾನದ ಕಾವಲುಗಾರ ಬೊಬ್ಬಿಟ್ಟಾಗ ಕಳ್ಳರು ಕಾವಲುಗಾರನಿಗೆ ಚಾಕು ತೋರಿಸಿ ಜೀವ ಬೆದರಿಕೆಯೊಡ್ಡಿ ಪಲಾಯನಗೈದಿದ್ದಾರೆ.
ತಕ್ಷಣ ಕಾವಲುಗಾರ ಸ್ಥಳೀಯರಿಗೆ ಮಾಹಿತಿ ನೀಡಿದ್ದು, ದೇವಸ್ಥಾನದ ವಠಾರದಲ್ಲಿ ಸ್ಥಳೀಯರು ಜಮಾಯಿದ್ದಾರೆ. ಬಳಿಕ ಸಿಸಿಟಿವಿ ದೃಶ್ಯಾವಳಿಯನ್ನು ಪರಿಶೀಲಿಸಿದಾಗ ಇಬ್ಬರು ಕಳ್ಳರು ಬಂದಿರುವುದು, ಪಲಾಯನ ಮಾಡಿರುವುದು ಗೊತ್ತಾಗಿದೆ. ತಕ್ಷಣ ಸ್ಥಳೀಯರು ಹುಡುಕಾಡಿದಾಗ ಕಡಿಯಾಳಿ ಪೆಟ್ರೋಲ್ ಬಂಕ್ ಬಳಿ ಇಬ್ಬರು ಸೆರೆ ಸಿಕ್ಕಿದ್ದಾರೆ.
ಕಳ್ಳತನದ ಆರೋಪಗಳಿಬ್ಬರು ಓಡುತ್ತಿದ್ದ ವೇಳೆ ಓರ್ವ ಫಿಟ್ಸ್ ನಿಂದ ಮೂರ್ಛೆ ತಪ್ಪಿ ಬಿದ್ದಿದ್ದಾನೆ. ಆತನನ್ನು ಉಪಚರಿಸುತ್ತಿದ್ದ ಜೊತೆಗಿದ್ದ ಇನ್ನೋರ್ವ ಜನರನ್ನು ಕಂಡು ಓಡಲು ಯತ್ನಿಸಿದರೂ ಜನರ ಕೈಗೆ ಸಿಕ್ಕಿಬಿದ್ದಿದ್ದಾನ. ಮೂರ್ಛೆ ವ್ಯಾಧಿ ಉಲ್ಬಣಿಸಿ ಗಂಭೀರ ಸ್ಥಿತಿಯಲ್ಲಿದ್ದ ಆತನಿಗೆ ಸ್ಥಳೀಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಸಮಾಜಸೇವಕ ನಿತ್ಯಾನಂದ ಒಳಕಾಡು ಸ್ಥಳೀಯರ ಸಹಕಾರದಿಂದ ಮೂರ್ಛೆ ರೋಗಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ.
ಮತ್ತೊಬ್ಬನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳಿಬ್ಬರು ಕೇರಳ ಮೂಲದವರೆಂದು ತಿಳಿದು ಬಂದಿದೆ.
ದೇವಸ್ಥಾನದ ಕಾವಲುಗಾರನ ಕರ್ತವ್ಯ ಪ್ರಜ್ಞೆಗೂ ಶ್ಲಾಘನೆ ವ್ಯಕ್ತವಾಗಿದೆ.
