ಟೆಲಿಗ್ರಾಮ್‌ನಲ್ಲಿ ‘ಪಾರ್ಟ್‌ಟೈಮ್ ಜಾಬ್’ ಆಮಿಷಕ್ಕೆ ಬಲಿಯಾಗಿ ಉದ್ಯೋಗಿ ₹67 ಲಕ್ಷ ಕಳೆದುಕೊಂಡ!

ಬೆಂಗಳೂರು: ರಾಜ್ಯದಲ್ಲಾಗಲಿ, ದೇಶದಲ್ಲಾಗಲಿ ಸೈಬರ್ ವಂಚನೆ (Cyber Fraud) ಹೊಸದೇನಲ್ಲ. ಇತ್ತೀಚಿಗೆ ಬೆಂಗಳೂರಿನಲ್ಲಿ ಸಾಕಷ್ಟು ಪ್ರಕರಣಗಳು ಕೇಳಿಬಂದಿವೆ. ಈ ನಡುವೆ ಮತ್ತೊಂದು ಸೈಬರ್ ವಂಚನೆಯ ಘಟನೆ ನಡೆದಿದೆ. ಖಾಸಗಿ ಕಂಪನಿಯ ಉದ್ಯೋಗಿಯೊಬ್ಬರು ಟೆಲಿಗ್ರಾಮನಲ್ಲಿನ ಬಂದ ಪಾರ್ಟ್‌ಟೈಮ್ ಕೆಲಸದ ಸಂದೇಶ ನಂಬಿ 67 ಲಕ್ಷ ರೂ. ಕಳೆದುಕೊಂಡಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಹೆಚ್ಚು ಆದಾಯದ ಆಮಿಷವೊಡ್ಡಿ ಹಣ ದೋಚಿದರು
ಸತೀಶ್ ಕೆ (ಹೆಸರು ಬದಲಿಸಿದೆ) ಎಂಬ ಬೆಂಗಳೂರಿನ ನಿವಾಸಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಆನ್ಲೈನ್ ಮೋಸದ ಜಾಲಕ್ಕೆ ಸಿಲುಕಿ ಲಕ್ಷಗಟ್ಟಲೆ ಹಣ ಕಳೆದುಕೊಂಡಿದ್ದಾರೆ. ಜನವರಿ 11, 2025 ರಂದು 47 ವರ್ಷದ ಸತೀಶ್, ತಮ್ಮ ಟೆಲಿಗ್ರಾಂ ಸಂದೇಶವೊಂದರಲ್ಲಿ ಬಂದ ಲಿಂಕನ್ನು ಒತ್ತಿದಾಗ ‘ಆ್ಯಮಜಾನ್ ಇಂಡಿಯಾ ಪಾರ್ಟ್‌ಟೈಮ್ ಬೆನಿಫಿಟ್ ಜಾಬ್’ಎಂಬ ಗ್ರೂಪ್ಗೆ ಸೇರ್ಪಡೆಯಾಗಿದ್ದಾರೆ. ಗ್ರೂಪಿಗೆ ಸೇರಿದ ನಂತರ ಅದರ ನಿರ್ವಾಹಕರಿಂದ ಇವರಿಗೆ ಸಾಲು ಸಾಲು ಸಂದೇಶಗಳು ಬಂದಿತ್ತು. ಆ ಸಂದೇಶಗಳಲ್ಲಿ ಆ್ಯಮಜಾನ್ ಉತ್ಪನ್ನಗಳ ವಿಮರ್ಶೆಯ ಮೂಲಕ ಹಣಗಳಿಸುವುದರ ಕುರಿತು ಮಾಹಿತಿಗಳಿತ್ತು. ಆದರೆ ಈ ಕೆಲಸ ಮಾಡಲು ಸತೀಶ್ಗೆ ಹಣ ಪಾವತಿಸಿ ಕಮೀಶನ್ ಪಡೆಯುವಂತೆ ಹೇಳಿದ್ದಾರೆ.
ಮೊದಲಿಗೆ 1000 ರೂ. ಹೂಡಿಕೆ ಮಾಡಿದ ಸತೀಶ್ಗೆ 1,650 ರೂ.ಮರುಪಾವತಿಸಲಾಗಿತ್ತು. ಈ ಆದಾಯವನ್ನು ನಂಬಿದ ಅವರು, ಇನ್ನೂ ಹಲವು ಬಾರಿ ಹೂಡಿಕೆ ಮಾಡಿದ್ದರು. ಕಾಲಕ್ರಮೇಣ ದೊಡ್ಡ ಮೊತ್ತದ ಹಣ ಪಾವತಿಸಿ ಹೆಚ್ಚು ಆದಾಯ ಪಡೆಯಬಹುದು ಎಂದು ಆಮಿಷವೊಡ್ಡಿ ಅವರನ್ನು ಇನ್ನಷ್ಟು ಹೂಡಿಕೆ ಮಾಡುವಂತೆ ಮಾಡಿದ್ದಾರೆ. ಮೋಸದ ಜಾಲಕ್ಕೆ ಸಿಲುಕಿದ್ದ ಸತೀಶ್, ಕೇವಲ 7 ತಿಂಗಳ ಅಂತರದಲ್ಲಿ ಬರೋಬ್ಬರಿ 67,63,950 ರೂ.ಗಳನ್ನು ಕಳೆದುಕೊಂಡಿದ್ದಾರೆ. ಎರಡು SBI ಖಾತಗಳು ಮತ್ತು ಒಂದು HDFC ಖಾತೆಗೆ ಹಣ ಕಳುಹಿಸಿದ ನಂತರ ಯಾವುದೇ ಆದಾಯ ಬರದೇ ಇದ್ದಾಗ ಸೈಬರ್ ಪೊಲೀಸರ ಮೊರೆ ಹೊಗಿದ್ದಾರೆ.
ನೀವು ಎಚ್ಚರವಹಿಸಬೇಕಾದ ವಿಷಯಗಳು
ಟೆಲಿಗ್ರಾಂ ಮತ್ತು ವಾಟ್ಸಾಪ್ಗಳಲ್ಲಿ ಬರುವ ಪಾರ್ಟ್‌ಟೈಮ್ ಕೆಲಸದ ಸಂದೇಶಗಳು
ಅತಿಹೆಚ್ಚು ಆದಾಯದ ಭರವಸೆ ನೀಡುವುದು
ಉತ್ಪನ್ನಗಳ ವಿಮರ್ಶೆಯಂತಹ ಕೆಲಸಗಳಿಗೆ ಹಣ ನೀಡುವುದಾಗಿ ಹೇಳುವುದು
ಗಳಿಸಿದ ಹಣ ಪಡೆಯಲು ಇನ್ನಷ್ಟು ಹಣ ಕೇಳುವುದು ಸಂದರ್ಶನವಿಲ್ಲದೇ ಕೆಲಸ ನೀಡುವುದು