ಕೋಲ್ಕತ್ತಾ ಶಾಲೆಗಳಲ್ಲಿ ಬಿಸಿಯೂಟದ ಬದಲಾವಣೆ: ಮೆನುವಿನಿಂದ ಮೊಟ್ಟೆ ಔಟ್; ಇನ್ನು ಮುಂದೆ ಸಸ್ಯಾಹಾರಿ ಆಹಾರ!

ಕೋಲ್ಕತಾ: ಕೋಲ್ಕತ್ತಾದ ಸರಕಾರಿ ಮತ್ತು ಅನುದಾನಿತ ಶಾಲೆಗಳ ಮಧ್ಯಾಹ್ನದ ಬಿಸಿಯೂಟ ಯೋಜನೆಯಿಂದ ಮೊಟ್ಟೆ ಕೈಬಿಡಲು ಪಶ್ಚಿಮಬಂಗಾಳ ಸರಕಾರ ನಿರ್ಧರಿಸಿದೆ.
ಪಶ್ಚಿಮಬಂಗಾಳ ಸರಕಾರ ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಇಂಟರ್ನ್ಯಾಷನಲ್ ಸೊಸೈಟಿ ಫಾರ್ ಕೃಷ್ಣ ಕಾನ್ಶಿಯಸ್ನೆಸ್ (ಇಸ್ಕಾನ್ ಸಂಸ್ಥೆಯು ಬೇಯಿಸಿದ ಸಸ್ಯಾಹಾರ ಆಹಾರವನ್ನು ಪೂರೈಸಲಿದೆ ಎಂದು ಪ್ರಕಟಿಸಿದ ಬಳಿಕ ಈ ನಿರ್ದಾರ ತೆಗೆದುಕೊಂಡಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಇಸ್ಕಾನ್ನ ಕೋಲ್ಕತ್ತಾ ವಕ್ತಾರರಾದ ರಾಧಾರಮಣ್ ದಾಸ್ ಅವರು, ಬಿಸಿಯೂಟದಲ್ಲಿ ಮೊಟ್ಟೆಗಳು ಇರುವುದಿಲ್ಲ. ಬದಲಿಗೆ ಪನೀರ್, ರಾಜ್ಯಾ ಸೋಯಾಬೀನ್, ಬೇಳೆಕಾಳುಗಳು ಮತ್ತು ಇತರ ಸಸ್ಯಹಾರಿ ಪ್ರೊಟೀನ್ ಮೂಲಗಳನ್ನು ಒಳಗೊಂಡಿರುವ ಪದಾರ್ಥಗಳು ಇರುತ್ತವೆ ಎಂದು ತಿಳಿಸಿದ್ದಾರೆ.

ಪಶ್ಚಿಮಬಂಗಾಳದಲ್ಲಿ ಈಗಿರುವ ವ್ಯವಸ್ಥೆಯಡಿ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ವಾರಕ್ಕೊಮ್ಮೆ ಮೊಟ್ಟೆಗಳನ್ನು ನೀಡಲಾಗುತ್ತದೆ. ಉಳಿದ ಶಾಲಾ ದಿನಗಳಲ್ಲಿ ಅನ್ನ, ಬೇಳೆ, ದಾಲ್ ಸಾರು ಮತ್ತು ಆಲೂಗಡ್ಡೆ ಪಲ್ಯ ನೀಡಲಾಗುತ್ತದೆ.
“ನಮ್ಮ ಮೆನುವನ್ನು ಸಿದ್ಧಪಡಿಸಲು ನಾವು ಆಹಾರ ತಜ್ಞರನ್ನು ನೇಮಿಸಿಕೊಂಡಿದ್ದೇವೆ. ಮಗುವಿಗೆ ಮೊಟ್ಟೆಯಿಂದ ಸಿಗುವ ಪೋಷಕಾಂಶಗಳನ್ನು ನಮ್ಮ ಊಟದಲ್ಲಿರುವ ಉತ್ತಮ ಗುಣಮಟ್ಟದ ಪ್ರೊಟೀನ್ ಮತ್ತು ಜೀವಸತ್ವಗಳ ಮೂಲಕ ಒದಗಿಸಲಾಗುವುದು ಅಥವಾ ಅದಕ್ಕಿಂತ ಹೆಚ್ಚಿನದನ್ನು ನೀಡಲಾಗುವುದು ಎಂಬುದನ್ನು ನಾವು ಖಚಿತಪಡಿಸುತ್ತೇವೆ” ಎಂದು ಅವರು ಹೇಳಿದ್ದಾರೆ.ಈ ಕಾರ್ಯಕ್ರಮವನ್ನು ಇಸ್ಕಾನ್ನ ‘ಅನ್ನಮಿತ್ರ ಫೌಂಡೇಶನ್ ಮೂಲಕ ಅನುಷ್ಠಾನಗೊಳಿಸಲಾಗುವುದು ಎಂದು ದಾಸ್ ತಿಳಿಸಿದ್ದಾರೆ. ಸಂಸ್ಥೆಯು ಸರಕಾರದಿಂದ ಶಾಲೆಗಳ ಪಟ್ಟಿಗಾಗಿ ಕಾಯುತ್ತಿದ್ದು ಬೇಯಿಸಿದ ಆಹಾರವನ್ನು ತಯಾರಿಸಲು ಮತ್ತು ವಿತರಿಸಲು ಅಡುಗೆ ಮನೆಗಳನ್ನು ಸಿದ್ದಗೊಳಿಸಲು ಯೋಜಿಸಿದೆ ಎಂದು ಅವರು ಹೇಳಿದ್ದಾರೆ.
ಇಸ್ಕಾನ್ ಈಗಾಗಲೇ ಎಂಟಕ್ಕೂ ಅಧಿಕ ರಾಜ್ಯಗಳು ಮತ್ತು 22 ನಗರಗಳಲ್ಲಿ ಇಂತಹದೇ ಮಧ್ಯಾಹ್ನದ ಬಿಸಿಯೂಟ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ದೇಶಾದ್ಯಂತ ಸುಮಾರು 12 ಲಕ್ಷ ವಿದ್ಯಾರ್ಥಿಗಳಿಗೆ ಆಹಾರ ಪೂರೈಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಪಶ್ಚಿಮಬಂಗಾಳದಲ್ಲಿ ಮಧ್ಯಾಹ್ನದ ಬಿಸಿಯೂಟದಿಂದ ಮೊಟ್ಟೆಗಳನ್ನು ಹೊರಗಿಡುವ ವರದಿಯ ಹಿನ್ನೆಲೆಯಲ್ಲಿ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಜಂಟಿ ಕಾರ್ಯದರ್ಶಿ ಡೆರೆಕ್ ಓಬ್ರಿಯಾನ್ ಅವರು ಬುಧವಾರ ಬಿಜೆಪಿಯನ್ನು ಗುರಿಯಾಗಿರಿಸಿಕೊಂಡು ವಾಗ್ದಾಳಿ ನಡೆಸಿದ್ದಾರೆ.
ಹೊಸ ಸರಕಾರ ಮಕ್ಕಳ ಪೌಷ್ಟಿಕಾಂಶವನ್ನು ಕಸಿದುಕೊಳ್ಳುತ್ತಿದೆ ಮತ್ತು ರಾಜ್ಯದಲ್ಲಿ ಸಸ್ಯಾಹಾರವನ್ನು ಬಲವಂತವಾಗಿ ಹೇರಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.