ಕೇರಳದಲ್ಲಿ ಡ್ರಗ್ಸ್ ದಂಧೆಕೋರರು ಅರೆಸ್ಟ್: ಅಲಪ್ಪುಳದಲ್ಲಿ ಮಹಿಳಾ ವಕೀಲೆ ಮತ್ತು ಆಕೆಯ 18 ವರ್ಷದ ಟೀನೇಜ್ ಮಗ ಸೇರಿ ಇಬ್ಬರ ಬಂಧನ!

ಅಲಪ್ಪುಳ: ಡ್ರಗ್ ಮಾರುತ್ತಿದ್ದ ವೇಳೆ ಕೇರಳದಲ್ಲಿ ಮಹಿಳಾ ವಕೀಲೆ ಹಾಗೂ ಆಕೆಯ 18 ವರ್ಷದ ಟೀನೇಜ್ ಮಗ ಸಿಕ್ಕಿಬಿದ್ದಿದ್ದು, ಘಟನೆಗೆ ಸಂಬಂಧಿಸಿದಂತೆ ದಾಳಿ ನಡೆಸಿದ ಪೊಲೀಸರು ಇದರ ಹಿಂದೆ ದೊಡ್ಡ ಜಾಲ ಇರುವುದನ್ನು ಪತ್ತೆ ಮಾಡಿದ್ದಾರೆ. ಇವರ ಬಳಿಯಿಂದ ಸೇಲ್ ಮಾಡುವುದಕ್ಕೆಂದು ಇಟ್ಟಿದ್ದ ಸುಮಾರು 3 ಗ್ರಾಂ ಎಂಡಿಎಂ ಅನ್ನು ವಶಕ್ಕೆ ಪಡೆಯಲಾಗಿದೆ. ಬಂಧಿತ ಮಹಿಳಾ ವಕೀಲೆಯನ್ನು ಆಕೆಯ 46 ವರ್ಷದ ಮಗ ಸತ್ಯಮೋಲ್ ಹಾಗೂ ಆಕೆಯ 18 ವರ್ಷದ ಮಗ ಸೌರವ್ ಎಂದು ಗುರುತಿಸಲಾಗಿದೆ ಅವರೆಲ್ಲರೂ ಅಲಪ್ಪುಳ ನಿವಾಸಿಗಳಾಗಿದ್ದಾರೆ.

ಕಾರಿನಲ್ಲಿದ್ದಾಗಲೇ ಬಂಧಿಸಿದ ಪೊಲೀಸರು
ಕೊಲ್ಲಂನ ಹೊಟೇಲೊಂದರ ಮುಂದೆ ಕಾರಿನಲ್ಲಿ ಇವರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಜಿಲ್ಲಾ ಮಾದಕವಸ್ತುಗಳ ವಿರೋಧಿ ದಳ ಹಾಗೂ ಪುನ್ನಪ್ರಾ ಪೊಲೀಸರು ಜಂಟಿಯಾಗಿ ನಡೆಸಿದ ಆಪರೇಷನ್ ಡಿ ಹಂಟ್ ಕಾರ್ಯಾಚರಣೆಯಲ್ಲಿ ಇವರನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ ಇಬ್ಬರು ಎರ್ನಾಕುಲಂನಿಂದ ಆಗಾಗ ಮಾದಕವಸ್ತುಗಳನ್ನು ಸಂಗ್ರಹಿಸಿ ತಂದು ಅಲಪುಳದಲ್ಲಿ ಮಾರುತ್ತಿದ್ದರು. ಸುಮಾರು 4ರಿಂದ 5 ಬಾರಿ ಇವರು ಇಲ್ಲಿ ಗಾಂಜಾ ಮಾರಾಟ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೌಟುಂಬಿಕ ನ್ಯಾಯಾಲಯದಲ್ಲಿ ವಕೀಲೆಯಾಗಿದ್ದ ಸತ್ಯಮೋಳ್
ಈಗ ಸಿಕ್ಕಿಬಿದ್ದಿರುವ ಮಹಿಳಾ ವಕೀಲ ಸತ್ಯಮೋಳ್, ಕರುಂಗಪಲ್ಲಿ ಕೌಟುಂಬಿಕ ನ್ಯಾಯಾಲಯದಲ್ಲಿ ವಕೀಲೆಯಾಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಈಕೆ ಪೊಲೀಸ್ ಚೆಕ್ಕಿಂಗ್‌ನಲ್ಲಿ ಪೊಲೀಸರ ತಪಾಸಣೆಯನ್ನು ತಪ್ಪಿಸುವುದಕ್ಕೆ ತನ್ನ ವಕೀಲರ ಲಾಂಚನವನ್ನು ಬಳಸುತ್ತಿದ್ದಳು. ಈಕೆ ಡ್ರಗ್ಸ್ ಖರೀದಿಗೆ ಬರುವ ವೇಳೆ ಇವಳ ಜೊತೆ ಯಾವಾಗಲೂ ಈಕೆಯ 18 ವರ್ಷದ ಮಗ ಇರುತ್ತಿದ್ದ ಎಂದು ಹೇಳಿದ್ದಾರೆ.
ಮನೆಯಲ್ಲಿತ್ತು ವ್ಯವಸ್ಥಿತ ಸ್ಮೋಕಿಂಗ್ ಏರಿಯಾ
ಇವರು ಪೊಲೀಸರಿಗೆ ಸಿಕ್ಕಿಬಿದ್ದ ನಂತರ ಈಕೆಯ ಮನೆಯ ಮೇಲೆ ಪೊಲೀಸರು ದಾಳಿ ಮಾಡಿದ್ದು, 2.5 ಗ್ರಾಂನ ಎಂಡಿಎಂಎ ಹಾಗು 40 ಗ್ರಾಂ ಗಾಂಜಾ, 2 ಗ್ರಾಂನ ಹೈಬ್ರೀಡ್ ಗಾಂಜಾ ರೋಲಿಂಗ್ ಪೇಪರ್ ಹಾಗೂ ಪ್ಲಾಸ್ಟಿಕ್ ಕವರ್‌ನ್ನು ವಶಕ್ಕೆ ಪಡೆದಿದ್ದಾರೆ. ದಾಳಿ ನಡೆಸಿದ ವೇಳೆ ಮನೆಯಲ್ಲಿ ಸ್ಮೋಕಿಂಗ್ ಏರಿಯಾ ಇರುವುದು ಕೂಡ ಪತ್ತೆಯಾಗಿದ್ದು, ಸ್ಥಳೀಯ ಯುವಕರು ಇಲ್ಲಿಗೆ ಆಗಾಗ ಭೇಟಿ ನೀಡುತ್ತಿದ್ದರು.
ಜಿಲ್ಲಾ ಪೊಲೀಸ್ ಮುಖ್ಯಸ್ಥ ಎಂಪಿ ಮೋಹನ್‌ಚಂದ್ರನ್ ಅವರಿಗೆ ಈ ಬಗ್ಗೆ ಖಚಿತವಾದ ಗುಪ್ತಚರ ಮಾಹಿತಿ ಬಂದ ನಂತರ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಮಾದಕ ವಸ್ತುಗಳ ನಿಯಂತ್ರಣ ಸೆಲ್‌ನ ಉಪ ಎಸ್‌ಪಿ ಬಿ ಪಂಕಜಕ್ಷನ್ ಹಾಗೂ ಅಂಬಲಪ್ಪುಜ್ಜ ಡೆಪ್ಯೂಟಿ ಎಸ್‌ಪಿ ಕೆಎನ್ ರಾಜೇಶ್, ಹಾಗೂ ಪುನ್ನಪ್ರಾ ಸಬ್ ಇನ್ಸ್‌ಪೆಕ್ಟರ್ ಅರುಣ್ ಎಸ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ಈ ವಕೀಲೆ ಮನೆಯ ಸುತ್ತಲೂ ಕಣ್ಗಾವಲಿಗಾಗಿ ಸಿಸಿಟಿವಿಗಳನ್ನು ಅಳವಡಿಸಿದ್ದರು ಜೊತೆಗೆ ನಾಯಿಗಳನ್ನು ಸಾಕಿದ್ದರು ಎಂದು ಪೊಲೀಸರು ಹೇಳಿದ್ದಾರೆ. ಹಲವು ಸ್ಥಳೀಯರು ಈ ಮಾದಕ ವಸ್ತುಗಳ ಜಾಲಕ್ಕೆ ಆಳವಾಗಿ ಬೀಳುವುದನ್ನು ಕಾರ್ಯಾಚರಣೆ ತಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಒಟ್ಟಿನಲ್ಲಿ ಯುವ ಸಮುದಾಯಕ್ಕೆ ಡ್ರಗ್ ಮಾರಾಟ ಮಾಡಿ ಕಂಡವರ ಮಕ್ಕಳನ್ನು ಬಾವಿಗೆ ತಳ್ಳುತ್ತಿದ್ದ ವಕೀಲೆಯನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ಸುಶಿಕ್ಷಿತಳಾಗಿದ್ದು, ಈ ಕೃತ್ಯವೆಸಗುತ್ತಿರುವ ಈಕೆಯ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕಿದೆ.