“ಬಿಜೆಪಿಯಲ್ಲಿ ನವೆಂಬರ್ ಕ್ರಾಂತಿ ಅಂದ್ರೆ ಗಡ್ಕರಿ ಪ್ರಧಾನಿಯಾಗುವುದೇ?”: ಬಿಜೆಪಿ ಹೇಳಿಕೆಗೆ ಸಚಿವ ಸಂತೋಷ್ ಲಾಡ್ ತಿರುಗೇಟು!

ಬೀದರ್: ನವೆಂಬರ್‌ನಲ್ಲಿ ಬಿಜೆಪಿಯಲ್ಲೇ ಕ್ರಾಂತಿ ಆಗುತ್ತೆ ಎಂಬ ಅನುಮಾನಗಳಿದ್ದು, ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಪ್ರಧಾನಿ ಆಗುತ್ತಾರೆ ಎಂಬ ಕುತೂಹಲವಿದೆ. ಬಿಜೆಪಿಯವರು ಮಾತನಾಡುವ ಕ್ರಾಂತಿ ಇದೇ ಇರಬಹುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ. ನವೆಂಬರ್‌ನಲ್ಲಿ ಕ್ರಾಂತಿ ಆಗುತ್ತೆ ಎಂದೆನ್ನುವ ಬಿಜೆಪಿಯವರ ಹೇಳಿಕೆ ಕುರಿತು ನಗರದಲ್ಲಿ ಮಂಗಳವಾರ ಮಾತನಾಡಿ, ಸಂಪುಟ ವಿಸ್ತರಣೆ ಅಗತ್ಯತೆ ಖಂಡಿತವಾಗಿಯೂ ಇದೆ. ಬೇರೆಯವರಿಗೆ ಅವಕಾಶ ನೀಡಲು ಎಲ್ಲ ಸರ್ಕಾರಗಳು ಇದನ್ನು ಮಾಡುತ್ತವೆ.

ನಮ್ಮ ಕಾಂಗ್ರೆಸ್‌ನಲ್ಲಿ ಸಿಎಂ, ಡಿಸಿಎಂ ಹಾಗೂ ಹೈಕಮಾಂಡ್ ನಿರ್ಧರಿಸಿದ ಬಳಿಕ ವಿಸ್ತರಣೆ ಆಗಲಿದೆ. ಅನಗತ್ಯವಾಗಿ ಯಾರೂ ಗೊಂದಲಗಳನ್ನು ಸೃಷ್ಟಿಸಬಾರದು. ಸಚಿವಾಕಾಂಕ್ಷಿ ಶಾಸಕರು ಪಕ್ಷದ ವೇದಿಕೆಯಲ್ಲಿ ಕೇಳಲಿ ಹೊರತು ಮಾಧ್ಯಮಗಳ ಮೂಲಕ ಬೇಡ ಎಂದು ಮನವಿ ಮಾಡಿದರು. ಮುಖ್ಯಮಂತ್ರಿಗಳ ಜೊತೆ ಊಟ ಬಿಟ್ರೆ ಮತ್ತೇನೂ ಆಗಿಲ್ಲ. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆ ಕುರಿತು ಚರ್ಚೆ ಆಗಿದೆ ಅಷ್ಟೇ ಎಂದು ತಿಳಿಸಿದರು.
ಋತು ರಜೆ ಕೊಡದಿದ್ದರೆ ಕ್ರಮ
‘ರಾಜ್ಯದಲ್ಲಿ ದುಡಿಯುವ ಮಹಿಳೆಯರಿಗೆ ಋತುಚಕ್ರದ ಸಮಯದಲ್ಲಿ ರಜೆ ನೀಡುವ ನೀತಿಯನ್ನು ಪ್ರತಿಯೊಂದು ಕಂಪೆನಿಯೂ ಪಾಲಿಸಬೇಕು. ಇಲ್ಲದಿದ್ದರೆ ಕಾನೂನು ಪ್ರಕಾರ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಹೆಣ್ಣು ಮಕ್ಕಳ ಹಿತದೃಷ್ಟಿಯಿಂದ ಸರ್ಕಾರ ಕಾನೂನು ಮಾಡಿದೆ. ಇದಕ್ಕೂ ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ. ಸಾಹುಕಾರರ ಹೆಣ್ಣುಮಕ್ಕಳಿಗೆ ಸವಲತ್ತು ಇರುತ್ತದೆ. ದುಡಿಯುವ ವರ್ಗದ ಹೆಣ್ಣುಮಕ್ಕಳ ಕತೆ ಹೇಗೆ? ಹೀಗಾಗಿ ಸರ್ಕಾರ ವರ್ಷಕ್ಕೆ 12 ವೇತನ ಸಹಿತ ರಜೆ ದಿನಗಳನ್ನು ಘೋಷಿಸಿ ನೀತಿ ಮಾಡಿದೆ ಎಂದು ಸಮರ್ಥಿಸಿದರು.
ರಾಹುಲ್ ಗಾಂಧಿ ಸತ್ಯ ಹೇಳಲು ಹೊರಟಿದ್ದಾರೆ, ಅವರ ಹಿಂದೆ ನಿಲ್ಲೋಣ: ಸಚಿವ ಸಂತೋಷ್ ಲಾಡ್
ಇದನ್ನು ಕೇವಲ ಒಂದು ಕಾನೂನು ಎಂಬ ದೃಷ್ಟಿಯಲ್ಲಿ ನೋಡದೆ ಮಾನವೀಯ ದೃಷ್ಟಿಯಿಂದಲೂ ಕಂಪನಿಗಳು ನೋಡಬೇಕು. ಎಲ್ಲ ವರ್ಗಗಳೊಂದಿಗೂ ಚರ್ಚಿಸಿ, ಸಮಾಲೋಚಿಸಿಯೇ ನಿಯಮಗಳನ್ನು ರೂಪಿಸಲಾಗುವುದು. ರಜೆ ನೀತಿ ಜಾರಿ ಸಂಬಂಧ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಲಾಗುವುದು. ಇಲ್ಲವೇ ಸುಗ್ರೀವಾಜ್ಞೆ ಮಾಡಲಾಗುವುದು. ಕಂಪನಿಗಳಿಗೆ ಮಹಿಳಾ ಉದ್ಯೋಗಿಗೆ ಋತುಚಕ್ರ ರಜೆ ಕೊಡಬೇಕು ಎಂಬ ಸಾಮಾನ್ಯಜ್ಞಾನ, ಸೂಕ್ಷ್ಮತೆ ಇರಬೇಕು ಎಂದು ಸಂತೋಷ್ ಲಾಡ್ ಹೇಳಿದರು.