ಏಪ್ರಿಲ್ 10ರಿಂದ ಇಸ್ಲಾಮಾಬಾದ್‌ನಲ್ಲಿ ಇರಾನ್-ಅಮೆರಿಕ ಕದನ ವಿರಾಮ ಮಾತುಕತೆ ಆರಂಭ

ಟೆಹ್ರಾನ್/ಇಸ್ಲಾಮಾಬಾದ್: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆಯೇ, ಅಮೆರಿಕದೊಂದಿಗೆ ನಡೆಯಲಿರುವ ಮಹತ್ವದ ಕದನ ವಿರಾಮ ಮಾತುಕತೆಗಳು ಏಪ್ರಿಲ್ 10ರಿಂದ ಇಸ್ಲಾಮಾಬಾದ್ ನಲ್ಲಿ ಆರಂಭವಾಗಲಿವೆ ಎಂದು ಇರಾನ್ ರಾಷ್ಟ್ರೀಯ ಭದ್ರತಾ ಮಂಡಳಿ ತಿಳಿಸಿದೆ.
ಈ ಚರ್ಚೆಗಳು ಇರಾನ್ ರೂಪಿಸಿರುವ 10 ಅಂಶಗಳ ಸಮಗ್ರ ಯೋಜನೆಯ ಆಧಾರದಲ್ಲಿ ನಡೆಯಲಿದ್ದು ಭದ್ರತೆ, ಆರ್ಥಿಕತೆ ಮತ್ತು ಪ್ರಾದೇಶಿಕ ಶಕ್ತಿಸಮತೋಲನದ ಪ್ರಶ್ನೆಗಳು ಪ್ರಮುಖವಾಗಿ ಚರ್ಚೆಗೆ ಬರಲಿವೆ.
ಮಂಡಳಿಯ ಹೇಳಿಕೆಯ ಪ್ರಕಾರ. ಯೋಜನೆಯ ಕೇಂದ್ರಬಿಂದುವಾಗಿ ಹಾರ್ಮುಝ್ ಜಲಸಂಧಿ ಉಲ್ಲೇಖಗೊಂಡಿದೆ. ಇರಾನ್ ನ ಸಶಸ್ತ್ರ ಪಡೆಗಳ ಸಮನ್ವಯದೊಂದಿಗೆ ಹಾರ್ಮುಝ್ ಮೂಲಕ ನಿಯಂತ್ರಿತ ಸಾಗಣೆ ವ್ಯವಸ್ಥೆಯನ್ನು ಜಾರಿಗೆ ತರುವ ಪ್ರಸ್ತಾವನೆ ಮಾಡಲಾಗಿದೆ. ಜಗತ್ತಿನ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವ ಈ ಜಲಸಂಧಿಯ ಮೇಲಿನ ನಿಯಂತ್ರಣದಿಂದ ಇರಾನ್ ಗೆ ವಿಶಿಷ್ಟ ಆರ್ಥಿಕ ಹಾಗೂ ಭೌಗೋಳಿಕ ರಾಜಕೀಯ ಪ್ರಾಬಲ್ಯ ಸಿಗುತ್ತದೆ ಎಂದು ಹೇಳಲಾಗಿದೆ.
ಕದನ ವಿರಾಮ ಯೋಜನೆಯ ‘ಪ್ರತಿರೋಧದ ಅಕ್ಷ (Axis of Resistance) ಎಂಬುದು ಎಲ್ಲ ಅಂಶಗಳ ವಿರುದ್ಧ ನಡೆಯುತ್ತಿರುವ ಯುದ್ಧವನ್ನು ಸಂಪೂರ್ಣವಾಗಿ ಅಂತ್ಯಗೊಳಿಸುವ ಅಗತ್ಯವನ್ನೂ ಒತ್ತಿ ಹೇಳುತ್ತದೆ. ಈ ಮೂಲಕ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಪುನಃ ಸ್ಥಾಪಿಸುವ ಉದ್ದೇಶವನ್ನು ಇರಾನ್ ಮುಂದಿಟ್ಟಿದೆ. ಜೊತೆಗೆ, ಗಲ್ಫ್ ನಲ್ಲಿನ ಎಲ್ಲಾ ಮಿಲಿಟರಿ ನೆಲೆಗಳು ಹಾಗೂ ನಿಯೋಜನೆ ಕೇಂದ್ರಗಳಿಂದ ಅಮೆರಿಕದ ಪಡೆಗಳನ್ನು ಹಿಂತೆಗೆದುಕೊಳ್ಳಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ.
ಹಾರ್ಮುಝ್ ಜಲಸಂಧಿಯಲ್ಲಿ ಸುರಕ್ಷಿತ ಸಾಗಣೆಗಾಗಿ, ಒಪ್ಪಿಗೆಯಾದ ಪ್ರೋಟೋಕಾಲ್ ಪ್ರಕಾರ ಇರಾನ್ ಪ್ರಾಬಲ್ಯವನ್ನು ಖಾತರಿಪಡಿಸುವ ರೀತಿಯಲ್ಲಿ ವಿಶೇಷ ಸಾರಿಗೆ ವ್ಯವಸ್ಥೆಯನ್ನು ರೂಪಿಸುವುದಾಗಿ ಯೋಜನೆ ಹೇಳುತ್ತದೆ. ಇದು ಕೇವಲ ವ್ಯಾಪಾರಕ್ಕೆ ಮಾತ್ರವಲ್ಲ ಸಮುದ್ರ ಭದ್ರತೆಗೂ ಸಂಬಂಧಿಸಿದ ಪ್ರಮುಖ ಕ್ರಮವೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓಡಿ ಕದನ ವಿರಾಮ | ಟ್ರಂಪ್ ನಿರ್ಧಾರಕ್ಕೆ ಇಸ್ರೇಲ್ ಬೆಂಬಲ, ಲೆಬನಾನ್ ಅನ್ವಯಿಸುವುದಿಲ್ಲ ಎಂದ ನೆತನ್ಯಾಹು!
ಇದರ ಜೊತೆಗೆ, ಇತ್ತೀಚಿನ ಸಂಘರ್ಷಗಳಿಂದ ಇರಾನ್ ಅನುಭವಿಸಿದ ಹಾನಿಗಳಿಗೆ ಸಂಪೂರ್ಣ ಪರಿಹಾರ ಪಾವತಿಯನ್ನು ಒದಗಿಸಬೇಕೆಂದು ಆಗ್ರಹಿಸಲಾಗಿದೆ. ಗವರ್ನರ್ ಗಳ ಮಂಡಳಿ ಹಾಗೂ ಭದ್ರತಾ ಮಂಡಳಿಯ ಮೂಲಕ ವಿಧಿಸಲಾದ ಪ್ರಾಥಮಿಕ ಮತ್ತು ದ್ವಿತೀಯ ನಿರ್ಬಂಧಗಳು ಹಾಗೂ ನಿರ್ಣಯಗಳನ್ನು ರದ್ದುಪಡಿಸುವಂತೆ ಕೂಡಾ ಇರಾನ್ ಒತ್ತಾಯಿಸಿದೆ.
ವಿದೇಶಗಳಲ್ಲಿ ಮುಟ್ಟಗೋಲು ಹಾಕಿಕೊಂಡಿರುವ ಇರಾನ್ ನ ಎಲ್ಲಾ ಆಸ್ತಿಗಳನ್ನು ಬಿಡುಗಡೆ ಮಾಡಬೇಕೆಂಬುದೂ ಯೋಜನೆಯ ಪ್ರಮುಖ ಅಂಶವಾಗಿದೆ. ಈ ಆರ್ಥಿಕ ಅಂಶಗಳು ಇರಾನ್ ನ ಆಂತರಿಕ ಆರ್ಥಿಕ ಸ್ಥಿತಿಗೆ ನೇರವಾಗಿ ಪರಿಣಾಮ ಬೀರುವುದರಿಂದ, ಮಾತುಕತೆಯಲ್ಲಿ ಇವು ಪ್ರಮುಖ ವಿಚಾರಗಳಾಗುವ ಸಾಧ್ಯತೆ ಇದೆ.
ಈ ಎಲ್ಲಾ ಅಂಶಗಳಿಗೆ ಭದ್ರತಾ ಮಂಡಳಿಯ ಬಗ್ಗೆ ನಿರ್ಣಯದ ಮೂಲಕ ಅಂತಿಮ ಮಾನ್ಯತೆ ಪಡೆಯುವಂತೆ ಯೋಜನೆ ರೂಪಿಸಲಾಗಿದೆ. ಇದರಿಂದ ಒಪ್ಪಂದಕ್ಕೆ ಅಂತರರಾಷ್ಟ್ರೀಯ ಮಾನ್ಯತೆ ಸಿಗುವುದರ ಜೊತೆಗೆ, ಭವಿಷ್ಯದಲ್ಲಿ ಅನುಷ್ಠಾನಕ್ಕೆ ಬಲ ಸಿಗಲಿದೆ ಎಂದು ಹೇಳಲಾಗಿದೆ.
ಇದರಿಂದಾಗಿ, ಈ 10 ಅಂಶಗಳ ಯೋಜನೆ ಕೇವಲ ದ್ವಿಪಕ್ಷೀಯ ಚರ್ಚೆಯಷ್ಟೇ ಅಲ್ಲದೆ, ಸಂಪೂರ್ಣ ಮಧ್ಯಪ್ರಾಚ್ಯದ ರಾಜಕೀಯ ಮತ್ತು ಭದ್ರತಾ ಸಮೀಕರಣಗಳನ್ನು ಮರು ರೂಪಿಸುವ ಸಾಧ್ಯತೆಯೂ ಇದೆ. ಮುಂದಿನ ದಿನಗಳಲ್ಲಿ ಈ ಮಾತುಕತೆಗಳ ಫಲಿತಾಂಶ ಜಾಗತಿಕ ರಾಜಕೀಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.
