ದೀಪಿಕಾಗೆ ಟಾಂಗ್ ಕೊಟ್ಟರಾ ಆಮಿರ್ ಖಾನ್?

ಬಾಲಿವುಡ್ನಲ್ಲಿ ದೀಪಿಕಾ ಪಡುಕೋಣೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ ಎಂಬುದು ಗೊತ್ತಿರುವ ವಿಚಾರ. ಅವರು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಮತ್ತು ಏಳು ಗಂಟೆ ಮಾತ್ರ ಸಿನಿಮಾದಲ್ಲಿ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಅವರು ‘ಕಲ್ಕಿ 2898 ಎಡಿ’ ಚಿತ್ರದ ಸೀಕ್ವೆಲ್ನಿಂದ ಹೊರ ನಡೆದಿದ್ದಾರೆ. ಹೀಗಿರುವಾಗಲೇ ಆಮಿರ್ ಖಾನ್ಅವರ ಹೇಳಿಕೆ ವೈರಲ್ ಆಗಿದೆ. ಇದು ದೀಪಿಕಾ ಅವರಂಥ ನಟಿಯರಿಗೆ ಕೊಟ್ಟ ಟಾಂಟ್ ಇರಬಹುದೇ ಎನ್ನುವ ಚರ್ಚೆ ಶುರುವಾಗಿದೆ.

ಆಮಿರ್ ಖಾನ್ ಅವರು ಬಾಲಿವುಡ್ನಲ್ಲಿ ಹಲವು ವರ್ಷಗಳಿಂದ ಇದ್ದಾರೆ. ಅವರಿಗೆ ಚಿತ್ರರಂಗದ ಆಳ ಅಗಲ ತಿಳಿದಿದೆ. ಅವರು ನಿರ್ಮಾಪಕರಾಗಿಯೂ ಅನುಭವ ಪಡೆದಿದ್ದಾರೆ. ನಿರ್ಮಾಪಕ ಎಂದಾಗ ಹತ್ತಾರು ಸಮಸ್ಯೆಗಳು ಬರುತ್ತವೆ. ಹೀಗಾಗಿ, ಹೀರೋ ಸ್ಥಾನದಲ್ಲಿ ನಿಂತಾಗ ಅವರಿಗೆ ನಿರ್ಮಾಪಕರ ಸಮಸ್ಯೆ ಗೊತ್ತಿದೆ. ಅವರು ಸಂದರ್ಶನ ಒಂದರಲ್ಲಿ ಈ ಬಗ್ಗೆ ಮಾತನಾಡಿದ್ದರು.
‘ಸಿನಿಮಾ ಏನನ್ನು ಕೇಳುತ್ತದೆಯೋ ಅದಕ್ಕೆ ಮಾತ್ರ ನೀವು ಹಣ ಕೇಳಬೇಕು. ಮೇಕಪ್ ಮ್ಯಾನ್ಗೆ ಹಣ ನೀಡಿ ಎಂದೆಲ್ಲ ಕೇಳಬಾರದು. ಡ್ರೈವರ್ ಅವರು ನನಗೋಸ್ಕರ ಕೆಲಸ ಮಾಡುತ್ತಾರೆ. ಅವರಿಗೆ ನಾನು ಹಣ ಕೊಡಬೇಕೆ ಹೊರತು ನಿರ್ಮಾಪಕರಲ್ಲ. ಮೇಕಪ್ ಮಾಡಿಕೊಳ್ಳಲು ಒಂದು ವಾಹನ ಸಾಕು. ಮೀಟಿಂಗ್ಗೆ ಇನ್ನಷ್ಟು ವಾಹನ ಬೇಕು ಎಂದರೆ ಅದನ್ನು ನಾನೇ ಬುಕ್ ಮಾಡಿಕೊಳ್ಳಬೇಕು. ಅನೇಕ ಸೆಲೆಬ್ರಿಟಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಇದು ಸರಿ ಅಲ್ಲ’ ಎಂದು ಆಮಿರ್ ಖಾನ್ ಅವರು ಈ ಮೊದಲು ಹೇಳಿದ್ದರು.
ಆಮಿರ್ ಖಾನ್ ಮಾತು ಸದ್ಯದ ಪರಿಸ್ಥಿತಿಗೆ ಪ್ರಸ್ತುತವಾಗಿದೆ ಎಂದು ಅನೇಕರು ಹೇಳಿದ್ದಾರೆ. ದೀಪಿಕಾ ಪಡುಕೋಣೆ ಅವರು ಅನ್ಯತಾ ನಿರ್ಮಾಪಕರಿಗೆ ಹೊರೆ ಆಗಿದ್ದರಿಂದಲೇ ಸಿನಿಮಾದಿಂದ ಅವರನ್ನು ಹೊರಕ್ಕೆ ಇಡುವ ಕೆಲಸ ಆಗಿದೆ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ, ‘ಕಲ್ಕಿ 2898 ಎಡಿ’ ಸೀಕ್ವೆಲ್ ಚಿತ್ರದ ಪರಿಸ್ಥಿತಿ ಡೋಲಾಯಮಾನವಾಗಿದೆ. ಆಮಿರ್ ಖಾನ್ ಅವರು ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಅಲ್ಲೊಂದು ಇಲ್ಲೊಂದು ಸಿನಿಮಾ ಒಪ್ಪಿ ನಟಿಸುತ್ತಿದ್ದಾರೆ.
