Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕೇರಳದಲ್ಲಿ ಅಯ್ಯಪ್ಪ ಭಕ್ತರ ಭಕ್ತಿಪೂರ್ವಕ ಸಂಗಮ!

Spread the love

ದೇವರ ನಾಡು ಎಂದೇ ಪ್ರಖ್ಯಾತಿಗೊಂಡಿರುವ ಕೇರಳದಲ್ಲಿ ಈಗ ವಿವಾದವೊಂದು ತೀವ್ರ ಸ್ವರೂಪ ದಲ್ಲಿ ತಲೆ ಎತ್ತಿಕೊಂಡಿದೆ. ಅಲ್ಲಿನ ಎಡರಂಗ ಸರಕಾರದ ಅಧೀನದಲ್ಲಿರುವ ತಿರುವಾಂಕೂರು ದೇವಸ್ವಂ ಮಂಡಳಿಯು ಇತಿಹಾಸ ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲದ ಪಂಪಾ ನದಿ ತೀರದಲ್ಲಿ ಸೆ.20ರಂದು ‘ಜಾಗತಿಕ ಅಯ್ಯಪ್ಪ ಸಂಗಮ’ ಕಾರ್ಯಕ್ರಮ ಏರ್ಪಡಿಸಲು ಸಜ್ಜಾಗಿದೆ.

ಶಬರಿಮಲೆ ಕ್ಷೇತ್ರದ ಖ್ಯಾತಿ ವಿಶ್ವದಾದ್ಯಂತ ಇನ್ನಷ್ಟು ಹೆಚ್ಚು ಪಸರಿಸಬೇಕು, ದೇಗುಲವನ್ನು ಇನ್ನಷ್ಟು ಅಭಿವೃದ್ಧಿ ಮಾಡಬೇಕೆಂಬ ಹಿನ್ನೆಲೆಯಲ್ಲಿ ನಡೆಸುತ್ತಿರುವ ಗಣ್ಯರ ಸಮಾವೇಶ, ಸಂವಾದ ಕಾರ್ಯಕ್ರಮ ಇದಾಗಿದೆ ಎಂದು ಕೇರಳ ಸರಕಾರ ಹೇಳಿಕೊಂಡಿದೆ. ಇದು ಸರಕಾರದ ನೇರ ಕಾರ್ಯಕ್ರಮವಲ್ಲ, ರಾಜ್ಯದ ಮುಜರಾಯಿ ಇಲಾಖೆ (ತಿರುವಾಂಕೂರು ದೇವಸ್ವಂ ಮಂಡಳಿ) 75 ವರ್ಷಗಳನ್ನು ಪೂರೈಸುತ್ತಿರುವ ನೆನಪಿಗಾಗಿ ಇದನ್ನು ಹಮ್ಮಿಕೊಳ್ಳುತ್ತಿರುವುದಾಗಿಯೂ, ಸರಕಾರ ಅನುದಾನವನ್ನಷ್ಟೇ ನೀಡುತ್ತಿದೆ ಎಂದು ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಆದರೆ ಇದೀಗ ಈ ಕಾರ್ಯಕ್ರಮ ತೀವ್ರ ಸ್ವರೂಪದ ವಿವಾದವನ್ನೇ ಹುಟ್ಟು ಹಾಕಿದೆ. ಈ ಹಿಂದೆ ಎಡರಂಗ ಆಧಿಕಾರದಲ್ಲಿದ್ದಾಗ ಹಿಂದೂ ಭಕ್ತರ ಭಾವನೆಯನ್ನು ಲೆಕ್ಕಿಸದೆ ಶಬರಿಮಲೆಗೆ ಎಲ್ಲಾ ಮಹಿಳೆಯರಿಗೂ ಪ್ರವೇಶಾವಕಾಶ ನೀಡಿ, ಇಡೀ ಭಕ್ತ ಸಮುದಾಯಕ್ಕೇ ಘಾಸಿಯನ್ನುಂಟು ಮಾಡಿತ್ತು. ಈಗ ಹಿಂದೂ ಧರ್ಮದ ಬಗ್ಗೆ ಡಿಎಂಕೆ ನಾಯಕರು ತಮಿಳುನಾಡಿನಲ್ಲಿ ಸತತವಾಗಿ ಅವಹೇಳನಕಾರಿ ಹೇಳಿಕೆ ನೀಡುತ್ತಿದ್ದರೂ ಮೌನಿಯಾಗಿರುವ ಅಲ್ಲಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ’ಜಾಗತಿಕ ಅಯ್ಯಪ್ಪ ಸಂಗಮ’ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಿಡುವು ದಿಲ್ಲ ಎಂದು ಹಿಂದೂಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ, ಅಷ್ಟೇ ಅಲ್ಲದೆ ಸ್ಟಾಲಿನ್ ಅವರನ್ನು ಕೇರಳಕ್ಕೆ ಕಾಲಿಡಲು ಬಿಡುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿವೆ.

ಇದನ್ನೂ ಓದಿ: Sabarimala Temple: ಶಬರಿಮಲೆ ಅಯ್ಯಪ್ಪನ ಸನ್ನಿಧಾನದಲ್ಲೇ ಕರ್ನಾಟಕದ ಭಕ್ತ ಆತ್ಮಹತ್ಯೆ; ಆಘಾತಕಾರಿ ವಿಡಿಯೋ

ಕೇರಳ ಸರಕಾರದ ಸ್ಪಷ್ಟನೆ ಏನು: ‘ಜಾಗತಿಕ ಅಯ್ಯಪ್ಪ ಸಂಗಮ ಕಾರ್ಯಕ್ರಮವು ಪ್ರಪಂಚ ದಾದ್ಯಂತದ ಸುಮಾರು ಮೂರು ಸಾವಿರ ಅಯ್ಯಪ್ಪ ಭಕ್ತರು ಭಾಗವಹಿಸುವ ಮೊದಲ ಸಮಾವೇಶವಾಗಿದೆ. ಕಾರ್ಯಕ್ರಮದಲ್ಲಿ ಶಬರಿಮಲೆ ಅಭಿವೃದ್ಧಿಯ ಸಂವಾದ ಕಾರ್ಯಕ್ರಮ, ವಿವಿಧ ಅಭಿಪ್ರಾಯ ಸಂಗ್ರಹ ಮುಂತಾದ ವಿಷಯಗಳಿರಲಿವೆ. ಕೇರಳ ಸರಕಾರದ ಸಚಿವರಲ್ಲದೆ, ಕರ್ನಾಟಕ ಮತ್ತು ತೆಲಂಗಾಣದ ಸಚಿವರೂ ಇದರಲ್ಲಿ ಭಾಗಿಗಳಾಗಲಿದ್ದಾರೆ.

ಹಾಗಾಗಿಯೇ ತಮಿಳುನಾಡಿನ ಸಿ.ಎಂ ಸ್ಟಾಲಿನ್ ಅವರನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಹ್ವಾನಿಸಿದ್ದೇವೆ. ಶಬರಿಮಲೆಯನ್ನು ಜಾಗತಿಕ ಯಾತ್ರಾ ಕೇಂದ್ರವನ್ನಾಗಿ ಮಾಡುವ ಗುರಿ ಕೇರಳ ಸರಕಾರದ್ದಾಗಿದೆ. ಕೇರಳ ಸರಕಾರವು ಶಬರಿಮಲೆಯ ಅಭಿವೃದ್ಧಿಗಾಗಿ 1300 ಕೋಟಿ ರು. ಗಳ ಮಾಸ್ಟರ್‌ಪ್ಲ್ಯಾನ್ ಜಾರಿಗೊಳಿಸುವ ಚಿಂತನೆಯನ್ನೊಂದಿದೆ. ಅಲ್ಲಿಗೆ ವಿಮಾನ ಸೌಕರ್ಯ ಮತ್ತು ರೈಲ್ವೇ ಯೋಜನೆಯನ್ನು 2028ರ ವೇಳೆ ಕಾರ್ಯಗತಗೊಳಿಸುವ ಗುರಿಯನ್ನು ಹೊಂದಿದ್ದೇವೆ’ ಎಂದು ಕೇರಳದ ಮುಜರಾಯಿ ಸಚಿವ ವಿ.ಎನ್ ವಾಸವನ್ ಹೇಳಿದ್ದಾರೆ.

ಪ್ರತಿಪಕ್ಷಗಳ ತರಾಟೆ: ‘ಈ ಹಿಂದೆ ಶಬರಿಮಲೆಗೆ ಎಲ್ಲಾ ಮಹಿಳೆಯರ ಪ್ರವೇಶಕ್ಕೂ ಎಡರಂಗ ಸರಕಾರ ಬೆಂಬಲ ನೀಡಿ ಭಕ್ತರ ಭಾವನೆಗಳನ್ನು ಕೆರಳಿಸಿದೆ. ಇದೀಗ ಮತ್ತೆ ಭಕ್ತರ ಭಾವನೆಗಳಿಗೆ ವಿರುದ್ಧವಾಗಿ ಕೇರಳ ಸರಕಾರ ತನಗಿಷ್ಟ ಬಂದಂತಹ ನಿರ್ಧಾರಗಳನ್ನು ಶಬರಿಮಲೆ ವಿಷಯದಲ್ಲಿ ‘ಜಾಗತಿಕ ಅಯ್ಯಪ್ಪ ಸಂಗಮ’ ಕಾರ್ಯಕ್ರಮದ ಮೂಲಕ ತೆಗೆದುಕೊಳ್ಳುವ ಸಾಧ್ಯತೆ ಇದೆ. ಹಾಗಾಗಿ ಇವೆಲ್ಲವೂ ಭಕ್ತರ ಪಾಲಿಗೆ ನಿಜಕ್ಕೂ ಆತಂಕಕಾರಿ ಬೆಳವಣಿಗೆ’ ಎಂದು ಕೇರಳದ ಹಿರಿಯ ಕಾಂಗ್ರೆಸ್ ನೇತಾರ ಮತ್ತು ವಿಪಕ್ಷ ನಾಯಕ ವಿ.ಡಿ.ಸತೀಶನ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

‘ಶಬರಿಮಲೆ ವಿಷಯದಲ್ಲಿ ಕೇರಳ ರಾಜ್ಯದ ಎಡರಂಗ ಸರಕಾರವು ಭಕ್ತರ ಭಾವನೆಯೊಂದಿಗೆ ಚೆಲ್ಲಾಟವಾಡುತ್ತಿದೆ. ಈಗಾಗಲೇ ಕೇರಳದ ಬಹುತೇಕ ಜನತೆ ಎಡರಂಗದ ಬದಲು ಬಿಜೆಪಿಯನ್ನು ಪರ್ಯಾಯ ಶಕ್ತಿಯಾಗಿ ಬೆಳೆಸಲು ಯೋಚಿಸಿದ್ದಾರೆ. ಅದಕ್ಕೆ ಅವಕಾಶ ನೀಡದಿರಲು ಹಿಂದೂಗಳ ಕಣ್ಣಿಗೆ ಮಣ್ಣೆರಚುವ ರೂಪದಲ್ಲಿ ಜಾಗತಿಕ ಅಯ್ಯಪ್ಪ ಸಂಗಮ ನಡೆಸಲು ಹೊರಟಿದೆ.

ಹಿಂದೂ ಭಕ್ತರ ಭಾವವೆಗಳನ್ನು ಕೆರಳಿಸಿರುವ ಕೇರಳ ಸಿ.ಎಂ ಮತ್ತು ಸ್ಟಾಲಿನ್ ಈ ಕಾರ್ಯಕ್ರಮ ದಲ್ಲಿ ಭಾಗವಹಿಸುವ ಮೊದಲು ಹಿಂದೂಗಳ ಕ್ಷಮೆಯನ್ನು ಯಾಚಿಸಬೇಕು, ಇಲ್ಲದಿದ್ದರೆ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗುವುದು’ ಎಂದು ಕೇರಳ ರಾಜ್ಯ ಘಟಕದ ಬಿ.ಜೆ.ಪಿ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಪಕ್ಷದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಪ್ರತೀ ವರ್ಷ ಸರಿಸುಮಾರು 300 ಕೋಟಿ ರು. ಆದಾಯ ಶಬರಿಮಲೆ ದೇಗುಲಕ್ಕೆ ಲಭಿಸುತ್ತಿದೆ. ಅಲ್ಲಿನ ಈ ಹಣ ಕೇರಳ ರಾಜ್ಯದ ಬೇರೆ ಬೇರೆ ಉದ್ದೇಶ, ಯೋಜನೆಗಳಿಗೆ ಇಷ್ಟು ವರ್ಷಗಳ ಕಾಲವೂ ನಿರಂತರವಾಗಿ ಬಳಕೆಯಾಗುತ್ತಿತ್ತು. ಆ ಕಾರಣಕ್ಕಾಗಿಯೇ ನಿರೀಕ್ಷಿತ ಮಟ್ಟದಲ್ಲಿ ಶಬರಿಮಲೆ ಅಭಿವೃದ್ಧಿ ಕಂಡಿಲ್ಲ ಎಂಬುದು ವಾಸ್ತವ. ಆದರೆ ‘ಜಾಗತಿಕ ಅಯ್ಯಪ್ಪ ಸಂಗಮ’ ಕಾರ್ಯಕ್ರಮದ ಮೂಲಕ ತಮಗನಿಸಿದ ನಿರ್ಧಾರಗಳನ್ನು ಪ್ರಕಟಿಸಿ, ಹಿಂದೂ ಭಕ್ತರ ಭಾವನೆಗಳಿಗೆ ಇನ್ನಷ್ಟು ಧಕ್ಕೆ ತರುವ ರೀತಿಯಲ್ಲಿ ಕೇರಳ ಸರಕಾರ ಯಾವುದೇ ಮುಂದಡಿ ಇರಬಾರದು ಎಂಬುದು ಸಮಸ್ತ ಅಯ್ಯಪ್ಪಭಕ್ತರ ಒಕ್ಕೊರಲಿನ ಧ್ವನಿಯಾಗಿದೆ.

ಮಹಿಳೆಯರಿಗೆ ಪ್ರವೇಶ ನಿಷೇಧ

ಪುರಾತನ ಕಾಲದಿಂದಲೂ 10 ಮತ್ತು 50 ವಯಸ್ಸಿನ ಮಧ್ಯದ ಮಹಿಳೆಯರಿಗೆ ಶಬರಿಮಲೆಯಲ್ಲಿ ಪ್ರವೇಶ ನಿಷಿದ್ಧವಾಗಿತ್ತು. ಆ ವಿಷಯವು ವಿವಾದವಾಗಿ ಹಲವಾರು ನ್ಯಾಯಾಲಯವನ್ನೂ ದಾಟಿ, ಬಹಳಷ್ಟು ವರ್ಷ ಆದ ಬಳಿಕ ಸುಪ್ರೀಂಕೋರ್ಟ್ ಅಂಗಳವನ್ನೂ ತಲುಪಿತ್ತು. 2018ರಲ್ಲಿ ಕೇರಳದಲ್ಲಿ ಅಧಿಕಾರದಲ್ಲಿದ್ದ ಎಡರಂಗ ಸರಕಾರವು ಎಲ್ಲಾ ಮಹಿಳೆಯರಿಗೆ ಪ್ರವೇಶ ನೀಡಲು ತನ್ನದೇನೂ ಅಭ್ಯಂತರ ಇಲ್ಲ ಎಂದು ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದ್ದ ಕಾರಣಕ್ಕೆ ಸುಪ್ರೀಂ ಕೋರ್ಟ್ ಶಬರಿಮಲೆಗೆ ಮಹಿಳೆಯರ ನಿರ್ಬಂಧವನ್ನು ತಾತ್ಕಾಲಿಕವಾಗಿ ತೆರವು ಗೊಳಿಸಿತ್ತು. ಆಗ ಎಡರಂಗ ಸರಕಾರವು ಹೆಚ್ಚಿನ ಮುತುವರ್ಜಿ ವಹಿಸಿ, ತನ್ನ ಪೊಲೀಸ್ ಇಲಾಖೆಯ ಸಹಕಾರದಿಂದ ಮಹಿಳೆಯರಿಗೆ ಪ್ರೋತ್ಸಾಹ ನೀಡಿ ಸ್ವಾಮಿ ದರ್ಶನಕ್ಕೆ ಅವಕಾಶ ಕಲಿಸಿ ಲಕ್ಷಾಂತರ ಅಯ್ಯಪ್ಪಭಕ್ತರ ಕೆಂಗಣ್ಣಿಗೆ ಗುರಿಯಾಯಿತು. ಬಳಿಕ ಸುಪ್ರೀಂಕೋರ್ಟ್‌ನಲ್ಲಿ ಮತ್ತೊಮ್ಮೆ ಸಾರ್ವಜನಿಕ ಹಿತಾಸಕ್ತಿಯ ಅರ್ಜಿ ದಾಖಲಾಗಿ, ವಿಚಾರಣೆ ಸ್ಥಗಿತವಾಗಿರುವ ಕಾರಣ ಮಹಿಳೆಯರ ಮುಕ್ತ ಪ್ರವೇಶಕ್ಕೆ ಅವಕಾಶ ಇಲ್ಲದಂತಾಗಿದೆ.

ಶಬರಿಮಲೆಯ ಹಿನ್ನೆಲೆ

ಕೇರಳದ ಪುರಾತನ ಪ್ರಸಿದ್ಧ ಶಬರಿಮಲೆ ಅಯ್ಯಪ್ಪಸ್ವಾಮಿ ದೇಗುಲವು ದಕ್ಷಿಣ ಭಾರತದ ಪರಮ ಪವಿತ್ರ ಕ್ಷೇತ್ರ. ಎಲ್ಲಾ ಪುರುಷರಿಗೆ ಅಯ್ಯಪ್ಪಸ್ವಾಮಿಯ ದರ್ಶನಕ್ಕೆ ಅವಕಾಶ ಇದೆ. ಹಾಗೆಯೇ 10 ವಯಸ್ಸಿಗಿಂತ ಕಿರಿಯ ಬಾಲಕಿಯರು ಮತ್ತು ೫೦ ವರ್ಷಕ್ಕಿಂತ ಹಿರಿಯ ಮಹಿಳೆಯರಿಗೆ ಸ್ವಾಮಿ ದರ್ಶನಕ್ಕೆ ಅವಕಾಶವಿದೆ. ಪ್ರತೀ ವರ್ಷ ನವೆಂಬರ್ ತಿಂಗಳ ಮಧ್ಯಭಾಗದಿಂದ ಜನವರಿ ಮಕರ ಸಂಕ್ರಾಂತಿ ವರೆಗಿನ ಎರಡು ತಿಂಗಳ ವರೆಗೆ ದರ್ಶನ ಅವಕಾಶ ಇದ್ದು, ಅಯ್ಯಪ್ಪ ಭಕ್ತರು ಸ್ವಾಮಿ ದರ್ಶನಕ್ಕೆ 41 ದಿನಗಳ ಕಠಿಣ ವ್ರತ ಕೈಗೊಂಡು ಸನ್ನಿದಾನಕ್ಕೆ ತೆರಳುತ್ತಾರೆ. ಪ್ರತೀ ತಿಂಗಳ 15ನೇ ತಾರೀಕಿನ ಆಸುಪಾಸಿನ ವೇಳೆ ಕೇವಲ 3 ದಿನ ಮಾತ್ರ ದೇಗುಲ ತೆರೆಯುವ ಸಂಪ್ರದಾಯವೂ ಭಕ್ತರಿಗೆ ಸ್ವಾಮಿ ದರ್ಶನ ವ್ಯವಸ್ಥೆ ಇದೆ. ಮಕರ ಸಂಕ್ರಾತಿಯ ದಿನದಂದು ಅಲ್ಲಿ ಗೋಚರಿಸುವ ಮಕರವಿಳಕ್ಕು ಸ್ವಾಮಿಭಕ್ತರ ಪಾಲಿಗೆ ದಿವ್ಯವಾದ ಮಕರಜ್ಯೋತಿ ಆಗಿದೆ.


Spread the love
Share:

administrator

Leave a Reply

Your email address will not be published. Required fields are marked *