ಮಾಲಿನ್ಯ ನಿಯಂತ್ರಣಕ್ಕೆ ದೆಹಲಿ ಸರ್ಕಾರದ ಕಠಿಣ ನಿಯಮ: ₹84 ಲಕ್ಷದ ಬೆಂಜ್ ಕಾರು ₹2.5 ಲಕ್ಷಕ್ಕೆ ಮಾರಾಟ!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರಕಾರದ ಮಾಲಿನ್ಯ ನಿಯಂತ್ರಣಕ್ಕಾಗಿ ಕೈಗೊಂಡಿರುವ ನಿಯಮದಿಂದಾಗಿ ಅನೇಕರು ತಮ್ಮ ವಾಹನಗಳನ್ನು ಕಡಿಮೆ ಬೆಲೆಗೆ ಅನಿವಾರ್ಯವಾಗಿ ಮಾರಾಟ ಮಾಡಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಈ ಪೈಕಿ ಸಿರಿವಂತ ವ್ಯಕ್ತಿಯೊಬ್ಬರು 84 ಲಕ್ಷ ರೂ.ನೀಡಿ ಖರೀದಿಸಿದ್ದ ಮರ್ಸಿಡಿಸ್ ಬೆಂಜ್ ಕಾರನ್ನು ಕೇವಲ 2.5 ಲಕ್ಷ ರೂ.ಗೆ ಮಾರಾಟ ಮಾಡಿರುವುದು ಸುದ್ದಿಯಾಗಿದೆ.

ದೆಹಲಿಯಲ್ಲಿ ವಾಹನ ಮಾಲೀಕರ ಮೇಲೆ ಪರಿಣಾಮ ಬೀರುವ ಮಹತ್ವದ ಬೆಳವಣಿಗೆಯಲ್ಲಿ, ದೆಹಲಿ ಸರಕಾರದಿಂದ ಜುಲೈ 1 ರಿಂದ ಹೊಸ ನಿಯಮ ಜಾರಿಗೆ ತರುತ್ತಿದ್ದು, ಮಾಲಿನ್ಯ ನಿಯಂತ್ರಣ ಗುರಿ ಹೊಂದಿ 10 ವರ್ಷಕ್ಕಿಂತ ಹಳೆಯದಾದ ಡೀಸೆಲ್ ವಾಹನಗಳು ಮತ್ತು 15 ವರ್ಷಕ್ಕಿಂತ ಹಳೆಯದಾದ ಪೆಟ್ರೋಲ್ ವಾಹನಗಳಿಗೆ ಇಂಧನ ನೀಡುವುದಿಲ್ಲ ಎಂದು ಷರತ್ತು ವಿಧಿಸಲಾಗಿದೆ. ಸರಕಾರದ ನಿರ್ದೇಶನವು ವಾಯು ಗುಣಮಟ್ಟ ನಿರ್ವಹಣಾ ಆಯೋಗದ (CAQM) ಆದೇಶವನ್ನು ಅನುಸರಿಸಿದೆ.

ಸರಕಾರದ ನಿಯಮದಿಂದಾಗಿ ಹಳೆಯ ಕಾರುಗಳನ್ನು ಅತೀ ಕಡಿಮೆ ಬೆಲೆಗೆ ಮಾರಾಟ ಮಾಡುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಸರಕಾರದ ಕ್ರಮದಿಂದ ಚಿಂತಿತರಾದ ವರುಣ್ ವಿಜ್ ಎಂಬವರು 2015 ರಲ್ಲಿ 84 ಲಕ್ಷ ರೂ.ನೀಡಿ ಖರೀದಿಸಿದ ತಮ್ಮ ನೆಚ್ಚಿನ ಮರ್ಸಿಡಿಸ್-ಬೆಂಜ್ ML350 ಕಾರನ್ನು ಕೇವಲ 2.5 ಲಕ್ಷ ರೂ.ಗಳಿಗೆ ಮಾರಾಟ ಮಾಡಬೇಕಾಗಿದೆ ಎಂದು ಹೇಳಿಕೊಂಡಿದ್ದಾರೆ.
ದೆಹಲಿಯಲ್ಲಿ ನಿವಾಸಿಸುವ ವಿಜ್, ತಮ್ಮ ಕುಟುಂಬಕ್ಕೆ ಭಾವನಾತ್ಮಕ ಮೌಲ್ಯವನ್ನು ಹೊಂದಿರುವ ಕಾರನ್ನು ಕಳೆದುಕೊಂಡಿದ್ದೇನೆ ಎಂದು ನೋವು ಹೊರ ಹಾಕಿದ್ದಾರೆ.
ನನ್ನ ಕಾರು ಅತ್ಯುತ್ತಮ ಸ್ಥಿತಿಯಲ್ಲಿದ್ದು, 1.35 ಲಕ್ಷ ಕಿಲೋಮೀಟರ್ ಓಡಿದೆ, ಸರ್ಕಾರದ ಹೊಸ ನಿಯಮದಿಂದಾಗಿ ಅದನ್ನು ಮಾರಾಟ ಮಾಡಬೇಕಾಗಿದೆ ಹೊರತು ನನಗೆ ಬೇರೆ ಯಾವುದೇ ಆಯ್ಕೆ ಇರಲಿಲ್ಲ ಎಂದು ಹೇಳಿದ್ದಾರೆ.